ಮತದಾರರ ಪಟ್ಟಿಯಲ್ಲಿ ಲೋಪದೋಷ ಆಗದಂತೆ ಎಚ್ಚರ : ಬಿಎಲ್‌ಒಗಳಿಗೆ ಜಿಲ್ಲಾಧಿಕಾರಿ ಟಿ.ಜಗದೀಶ್ ಸೂಚನೆ

ಉಡುಪಿ, ಸೆ. 1: ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮವು ಸೆ.1 ರಿಂದ ಅ.15ರವರೆಗೆ ಆಯೋಜಿಸಲಾಗಿದ್ದು, ಈ ಬಾರಿ ಪಟ್ಟಿ ತಯಾರಿಸುವಾಗ ಮತಗಟ್ಟೆ ಅಧಿಕಾರಿ(ಬಿಎಲ್‌ಓ)ಗಳು ಹಾಗೂ ಡಾಟಾ ಎಂಟ್ರಿಯವರು ಯಾವುದೇ ಕಾರಣಕ್ಕೂ ತಪ್ಪು ಎಸಗಬಾರದು. ಲೋಪದೋಷಗಳನ್ನು ಕಡಿಮೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಟಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ನಗರಸಭೆ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ರವಿವಾರ ಆಯೋಜಿಸಲಾದ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಮತದಾರರು ದಾಖಲೆಗಳೊಂದಿಗೆ ವಾಸ್ತವ್ಯ ಇರುವ ವಿಳಾಸದ ಹತ್ತಿರದಲ್ಲಿರುವ ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೋಂದಣಿ ಅಧಿಕಾರಿ ಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಉಡುಪಿ ಒನ್/ಕರ್ನಾಟಕ ಒನ್, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ ಎಂದರು.
ವೋಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್ ಅಥವಾ ಹೊಸ ಎನ್‌ವಿಎಸ್‌ಪಿ ಪೋರ್ಟಲ್(www.nvsp.in) ಮೂಲಕ ಮತದಾರರ ಪಟ್ಟಿಯಲ್ಲಿ ನಮೂ ದಾಗಿರುವ ವಿವರಗಳನ್ನು ಪರಿಶೀಲಿಸಿ ದೃಢಿಕರೀಸಿಕೊಳ್ಳಬಹುದಾಗಿದೆ. ಪಟ್ಟಿ ಯಲ್ಲಿರುವ ತಪ್ಪುಗಳನ್ನು ಇವುಗಳ ಮೂಲಕ ಯಾವುದೇ ದಾಖಲೆಗಳನ್ನು ನೀಡದೆಯೇ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
1950 ಮತದಾರರ ಸಹಾಯವಾಣಿ ಮೂಲಕ ವಿಕಲಚೇತನ ಮತದಾರರು ಮಾಹಿತಿಯನ್ನು ಪಡೆಯಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಈವರೆಗೆ ಹೆಸರು ಸೇರ್ಪಡೆಗೊಳ್ಳದ ವಿಕಲಚೇತನರು ಸಹಾಯವಾಣಿಗೆ ಕರೆ ಮಾಡಿದರೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಲಿರುವರು ಎಂದು ಅವರು ಮಾಹಿತಿ ನೀಡಿದರು.
ಬಿಎಲ್‌ಓಗಳು ಮನೆಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ರುವ ಮತದಾರರ ಗುರುತಿಸುವ ಕಾರ್ಯ ನಡೆಸಬೇಕು. ಮತದಾರರ ಪಟ್ಟಿ ಶೇ.100ರಷ್ಟು ಪಾರದರ್ಶಕವಾಗಿರಬೇಕು. ತಮ್ಮಲ್ಲಿರುವ ಸ್ಮಾರ್ಟ್ ಫೋನ್‌ನಲ್ಲಿ ಮೊಬೈಲ್ ಆ್ಯಪ್ ಮೂಲಕ ಮತದಾರರ ಮಾಹಿತಿಯನ್ನು ಪರಿಶೀಲನೆ ಮಾಡ ಬೇಕು. ಮತದಾರರೊಂದಿಗೆ ಅವರ ಮನೆಯ ಫೋಟೋ ತೆಗೆದು, ಸ್ಥಳ ಗುರುತಿ ಗಾಗಿ ಮ್ಯಾಪಿಂಗ್ ಮಾಡಬೇಕು ಎಂದರು.
ಯಾವುದೇ ಅರ್ಜಿ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಇದರಿಂದ ಅರ್ಹ ಮತದಾರರ ಹಕ್ಕು ಕಿತ್ತುಕೊಂಡಾಗೆ ಆಗುತ್ತದೆ. ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಉಡುಪಿ ಜಿಲ್ಲೆ ಇಡೀ ದೇಶಕ್ಕೆ ಮಾದರಿ ಯಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ನಗರ ಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.







