ಹೆಸರು ಕಾಳು ಬೆಲೆ ಕುಸಿತ; ಆತಂಕದಲ್ಲಿ ರೈತರು..!

ಬೆಂಗಳೂರು, ಸೆ.1: ಸತತ ಬರದ ನಂತರ ಈ ಬಾರಿ ಬೀದರ್, ಕಲಬುರ್ಗಿ ಸೇರಿದಂತೆ ಹಲವು ಕಡೆ ‘ಹೆಸರು’ ಉತ್ತಮ ಫಸಲು ನೀಡಿದೆ. ಆದರೆ, ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಉಂಟಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಹಿಂದಿನ ವರ್ಷ ಹೆಸರು ಕಾಳು ಕ್ವಿಂಟಾಲ್‌ಗೆ ಗರಿಷ್ಠ 10 ಸಾವಿರ ರೂ.ವರೆಗೆ ದರ ದಾಟಿತ್ತು. ಈಗ ಕ್ವಿಂಟಾಲ್‌ಗೆ 5,600 ರೂ. ದರದಲ್ಲಿ ಬಿಕರಿಯಾಗುತ್ತಿದ್ದು, ಹಿಂದಿನ ವರ್ಷದಂತೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೊಂಡಿದ್ದಾರೆ. ಅಲ್ಲದೆ, ಇದಕ್ಕೆ ಕೇಂದ್ರ ಸರಕಾರವು ‘ಖರೀದಿ ಕೇಂದ್ರ’ ಆರಂಭ ಮಾಡದಿರುವುದೇ ಪ್ರಮುಖ ಕಾರಣ ಎಂದು ರೈತರು ದೂರುತ್ತಿದ್ದಾರೆ.
ಸಾಮಾನ್ಯವಾಗಿ ಜೂನ್‌ನಲ್ಲಿ ಹೆಸರು ಕಾಳು ಬೆಳೆ ಬಿತ್ತನೆ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಬರಗಾಲ ಎದುರಾಗಿದ್ದರಿಂದ ಬಿತ್ತನೆ ಪ್ರದೇಶ ಕಡಿಮೆಯಾಗಿತ್ತು. ಸ್ವಲ್ಪ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿದ ಪರಿಣಾಮ 3 ಲಕ್ಷಕ್ಕೂ ಅಧಿಕ ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ಹೆಸರು ಕಾಳು ಬಿತ್ತನೆಯಾಗಿದೆ.
ರಾಜ್ಯದಲ್ಲಿ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗ ಸೇರಿದಂತೆ ಹೈದರಾಬಾದ್ ಕರ್ನಾಟಕದಲ್ಲಿ ಹೆಸರು ಕಾಳು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಸದ್ಯ ಹೆಸರು ಕಾಳು ಬೆಳೆ ಹಂಗಾಮು ಮುಕ್ತಾಯದ ಹಂತದಲ್ಲಿದೆ. ಆದರೆ, ಒಂದು ತಿಂಗಳಿಂದ ದರ ಸುಧಾರಿಸದೇ ಇರುವುದರಿಂದ ರೈತರು ಬೆಳೆ ಮಾರಾಟ ಮಾಡದೆ ಉಳಿಸಿಕೊಂಡಿದ್ದಾರೆ ಎನ್ನುತ್ತಾರೆ ರೈತ ಅಶೋಕ್ ಸಿಂಧ್ಯಾ.
ಖರೀದಿ ಕೇಂದ್ರ ಬೇಕು: ಹೆಸರು ಕಾಳು ದರ ಕಡಿಮೆಯಾಗುತ್ತಿದ್ದಂತೆಯೇ ಸರಕಾರಗಳು ಒಂದು ಕ್ವಿಂಟಾಲ್ ಬೆಳೆಗೆ 7 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಆರಂಭ ಮಾಡಬೇಕು.
ಕಳೆದೆರಡು ವಾರಗಳ ಹಿಂದೆ ಬೆಂಬಲ ಬೆಲೆಗಿಂತ ಕಡಿಮೆ ಇದ್ದ ದರ ಈಗ ಅದರ ಸಮಾನಕ್ಕೆ ಬಂದಿದೆ. ಆದರೂ, ಖರೀದಿ ಕೇಂದ್ರಗಳಲ್ಲಿ ಇದುವರೆಗೆ ಒಂದೇ ಒಂದು ಕ್ವಿಂಟಾಲ್ ಹೆಸರು ಕಾಳು ಬೆಳೆ ಖರೀದಿಯಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೆಸರು ಕಾಳು ಬೆಳೆಗೆ ಈ ಬಾರಿ ಕಳೆದ ವರ್ಷಕ್ಕಿಂತ ಶೇ. 50 ರಷ್ಟು ದರ ಕಡಿಮೆಯಾಗಿದೆ.ಆದರೂ, ಖರೀದಿ ಕೇಂದ್ರ ತೆರೆದಿಲ್ಲ.
-ಸುಕುಮಾರ್ ರೈತ, ಕಲಬುರ್ಗಿ







