ವಿದೇಶಕ್ಕೆ ತೆರಳುತ್ತಿದ್ದ ಕಾಶ್ಮೀರಿ ಪತ್ರಕರ್ತ ಗೀಲಾನಿಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಡೆ

ಹೊಸದಿಲ್ಲಿ,ಸೆ.1: ಕಾಶ್ಮೀರಿ ಪತ್ರಕರ್ತ ಹಾಗೂ ಲೇಖಕ ಗೌಹರ್ ಅವರನ್ನು ಶನಿವಾರ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು,ಅವರು ದೇಶವನ್ನು ಬಿಡದಂತೆ ನಿರ್ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಜರ್ಮನಿಯ ಸರಕಾರಿ ಮಾಧ್ಯಮ ಡಾಯಚೆ ವೇಲೆ ಆಯೋಜಿಸಿರುವ ಸಮ್ಮೇಳನದಲ್ಲಿ ಭಾಗವಹಿಸಲು ಗೀಲಾನಿ ಆ ರಾಷ್ಟ್ರಕ್ಕೆ ಪ್ರಯಾಣಿಸಲಿದ್ದರು.
ತಾನು ಡಾಯಚೆಯಲ್ಲಿ ಸಂಪಾದಕ ಹುದ್ದೆಗೆ ಸೇರಿದ್ದು,ಸೆ.1ರಿಂದ ಆರಂಭಗೊಳ್ಳುವ ಎಂಟು ದಿನಗಳ ತರಬೇತಿ ಕಾರ್ಯಕ್ರಮಕ್ಕಾಗಿ ತೆರಳುತ್ತಿರುವುದಾಗಿ ಗೀಲಾನಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಗೀಲಾನಿ ದೇಶ ತೊರೆಯಲು ಅವಕಾಶ ನೀಡಕೂಡದು ಎಂಬ ನಿರ್ದೇಶಗಳನ್ನು ತಮಗೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ತನ್ನನ್ನು ತಡೆ ಹಿಡಿದಿದ್ದಕ್ಕಾಗಿ ಯಾವುದೇ ಲಿಖಿತ ಆದೇಶ ಅಥವಾ ವಿವರಣೆಯನ್ನು ನಿಡಿಲ್ಲ,ಕಾಶ್ಮೀರದಲ್ಲಿಯ ಪ್ರಚಲಿತ ಸ್ಥಿತಿಯಿಂದಾಗಿ ದೇಶವನ್ನು ಬಿಡಲು ಅವಕಾಶ ನೀಡುತ್ತಿಲ್ಲ ಎಂದಷ್ಟೇ ಅಧಿಕಾರಿಗಳು ತನಗೆ ತಿಳಿಸಿದ್ದರು ಎಂದು ಗೀಲಾನಿ ಹೇಳಿದ್ದಾರೆ.
ಗುಪ್ತಚರ ಸಂಸ್ಥೆ (ಐಬಿ)ಯ ಸೂಚನೆಯ ಮೇರೆಗೆ ಗೀಲಾನಿಯವರನ್ನು ತಡೆಹಿಡಿಯಲಾಗಿದೆ ಎಂದು ವಿಮಾನ ನಿಲ್ದಾಣದಲ್ಲಿಯ ಮೂಲಗಳನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.





