ಬಂಟ್ವಾಳ: ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿ

ಬಂಟ್ವಾಳ : ರವಿವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಸಿಡಿಲು ಬಡಿದು ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿ ಬೆಟ್ಟು ಪರಿಸರದ ಹಲವು ಮನೆಗಳಿಗೆ ಹಾನಿಯಾದ ಘಟನೆ ಸಂಭವಿಸಿದೆ.
ಭಂಡಾರಿಬೆಟ್ಟು ಗುಜ್ಕರೊಕ್ಕು ಲಾರೆನ್ಸ್ ರಾಡ್ರಿಗಸ್ ಎಂಬವರ ಮನೆಯ ಹಿಂಬದಿಯ ತೆಂಗಿನ ಮರ ಹಾಗೂ ಬಾಳೆಗಿಡಗಳಿಗೆ ಸಿಡಿಲು ಬಡಿದಿದ್ದು , ಘಟನೆಯ ತೀವ್ರತೆ ಗೆ ಲಾರೆನ್ಸ್ ಅವರ ಮನೆಯ ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ವಿದ್ಯುತ್
ಮೀಟರ್ , ಸ್ವಿಚ್ ಬೋರ್ಡ್ ಗಳು, ಬಲ್ಬ್ ಗಳು ಸಿಡಿಲು ಹೊಡೆತದ ರಭಸಕ್ಕೆ ಹೊರೆಕ್ಕೆ ಎಸೆಯಲ್ಪಟ್ಟಿದೆ. ಟಿವಿ, ಪ್ರಿಡ್ಜ್ ಸಹಿತ ವಿದ್ಯುತ್ ಉಪಕರಣಗಳು ಕೆಟ್ಟು ಹೊಗಿವೆ.
ಇದೇ ಪರಿಸರದ ಪ್ರೆಸಿಲ್ಲಾ ಡಿಸೋಜ, ಮೆಸ್ಕಾಂ ಸಿಬ್ಬಂದಿ ಯಲ್ಲಪ್ಪ, ರೇಖಾ ಮತ್ತು ಅಲೋಶಿಯಸ್ ಅವರ ಮನೆಯ ವಿದ್ಯುತ್ ಸಂಪರ್ಕ ಗಳಿಗೆ ಹಾನಿಯಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡರು.
ಸ್ಥಳಕ್ಕೆ ಕಂದಾಯ ಇಲಾಖೆಯ ಸೀತಾರಾಮ ಕಮ್ಮಾಜೆ, ಸಿಬ್ಬಂದಿ ಸದಾಶಿವ ಕೈಕಂಬ, ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಮಾಡಿದ್ದಾರೆ.
Next Story









