ಭಾರತೀಯ ಕಂಪೆನಿಗಳಿಂದ ಅಬುಧಾಬಿ ಕೈಗಾರಿಕಾ ವಲಯಗಳ ಬಳಕೆ: ಯುಎಇ

ಹೊಸದಿಲ್ಲಿ,ಸೆ.1: ಕೊಲ್ಲಿ ರಾಷ್ಟ್ರಗಳಾದ್ಯಂತ ವಿಸ್ತರಿಸಲು ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತನ್ನು ಹೆಚ್ಚಿಸಲು ಭಾರತೀಯ ಕಂಪೆನಿಗಳು ಅಬುಧಾಬಿಯ ಕೆಐಝಡ್ಎಡಿಯಂತಹ ಕೈಗಾರಿಕ ವಲಯಗಳನ್ನು ಬಳಸಿಕೊಳ್ಳುತ್ತಿವೆ ಎಂದು ಯುಎಇ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಅಬುಧಾಬಿ ಬಂದರುಗಳ ಉಪವಿಭಾಗ ಖಲೀಫ ಕೈಗಾರಿಕ ವಲಯ (ಕೆಐಝಡ್ಎಡಿ)ದಲ್ಲಿ ಭಾರತದಿಂದ ಗಣನೀಯ ಪ್ರಮಾಣದ ಹೂಡಿಕೆ ದಾಖಲಾಗುತ್ತಿದೆ ಎಂದು ಅಬುಧಾಬಿ ಕಾರ್ಯಕಾರಿ ಮಂಡಳಿಯ ಸದಸ್ಯ ಫಲಹ್ ಮುಹಮ್ಮದ್ಅಲ್ ಅಹ್ಬಬಿ ತಿಳಿಸಿದ್ದಾರೆ. 2012ರಲ್ಲಿ ಈ ವಲಯ ಉದ್ಘಾಟನೆಗೊಂಡ ನಂತರ ಭಾರತೀಯ ಕಂಪೆನಿಗಳು ಸುಮಾರು 645 ಕೋಟಿ ರೂ. ಹೂಡಿಕೆ ಮಾಡಿವೆ.
ಇದು ಅಬುದಾಬಿಯ ವ್ಯೆಹಾತ್ಮಕ ಸ್ಥಿತಿ, ಕೆಐಝಡ್ಎಡಿಯ ಸಾಗಾಟ ಸಾಮರ್ಥ್ಯ ಮತ್ತು ಖಲೀಫ ಬಂದರು ಒದಗಿಸುವ ಸಂಪರ್ಕ ವ್ಯವಸ್ಥೆಯ ಶಕ್ತಿಶಾಲಿ ಸಂಯೋಜನೆಯ ಫಲವಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಲೋಹ, ಆಹಾರ ಸಂಸ್ಕರಣ ಮತ್ತು ಪ್ಯಾಕೇಜಿಂಗ್, ಔಷಧಿ ತಯಾರಿಕೆ, ನಿರ್ಮಾಣ ಮತ್ತು ಮೋಟಾರ್ ವಾಹನ ಕೈಗಾರಿಕೆಗಳು ದಶಕಗಳಿಂದ ಯುಎಇಯಲ್ಲಿ ಮನೆಮಾತಾಗಿದೆ ಎಂದು ಅಲ್ ಅಹ್ಬಬಿ ತಿಳಿಸಿದ್ದಾರೆ. ಭಾರತೀಯ ಕಂಪೆನಿಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅಬುಧಾಬಿ ಬಂದರು, ಬಂದರು, ಕೈಗಾರಿಕೆ ಮತ್ತು ಸಾಗಾಟ ಮೂಲಸೌಕರ್ಯಗಳ ಮೇಲೆ ಅತಿಹೆಚ್ಚು ಹೂಡಿಕೆ ಮಾಡುತ್ತಿದ್ದು ಸೂಕ್ತ ಸಾಧನಗಳು ಮತ್ತು ಸಾಮರ್ಥ್ಯ ಲಭ್ಯವಿದೆ ಎನ್ನುವುದನ್ನು ಖಚಿತಪಡಿಸಲು ಮಹಾತ್ವಾಕಾಂಕ್ಷಿ ಗುರಿಗಳನ್ನು ಇಟ್ಟುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.