ಜನರ ಸಮಸ್ಯೆ ಆಲಿಸಲು ಫೋನ್ ಇನ್ ಕಾರ್ಯಕ್ರಮ: ಉಡುಪಿ ಡಿಸಿ ಜಗದೀಶ್

ಉಡುಪಿ, ಸೆ.1: ಉಡುಪಿ ಜಿಲ್ಲೆಯ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಜನರ ಅಹವಾಲು ಕೇಳುವ ನಿಟ್ಟಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಫೋನ್ ಇನ್ ಕಾರ್ಯ ಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ಜಗ ದೀಶ್ ತಿಳಿಸಿದ್ದಾರೆ.
ಉಡುಪಿ ನಗರಸಭೆಯಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಈ ಹಿಂದೆ ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಜನರ ಸಮಸ್ಯೆ ಆಲಿಸಲು ಫೋನ್ ಇನ್ ಕಾರ್ಯಕ್ರಮವನ್ನು ತಿಂಗಳಿಗೊಮ್ಮೆ ನಡೆಸಲಾಗು ತ್ತಿತ್ತು. ಇದೀಗ ಅದೇ ರೀತಿಯಲ್ಲಿ ಉಡುಪಿಯಲ್ಲೂ ಫೋನ್ ಇನ್ ಕಾರ್ಯ ಕ್ರಮ ನಡೆಸಲಾಗುವುದು ಎಂದರು.
ಜಿಲ್ಲೆಯ ಮರಳಿನ ಸಮಸ್ಯೆಯನ್ನು ಯಾವುದೇ ಕಾನೂನಿನ ತೊಡಕು ಇಲ್ಲದ ರೀತಿಯಲ್ಲಿ ಅತೀ ಶೀಘ್ರದಲ್ಲೇ ಬಗೆಹರಿಸಲು ಆ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಇಬ್ಬರಿಗೆ ಪರವಾನಿಗೆ ನೀಡಲಾಗಿದೆ. ಬಜೆ ಡ್ಯಾಂ ಪ್ರದೇಶದಲ್ಲಿ ಹೂಳು ತೆಗೆಯಲು ಮರು ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ಮರು ಸರ್ವೆ ಅಗತ್ಯ ಇಲ್ಲ. ಉಡುಪಿ ಜಿಲ್ಲೆಯ ಒಂದು ಮುಷ್ಠಿ ಮರಳು ಕೂಡ ಹೊರಗಡೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ಮರಳನ್ನು ಇಲ್ಲಿಯ ಜನರೇ ಬಳಸಬೇಕು ಎಂದು ಅವರು ತಿಳಿಸಿದರು.







