ಮಂಗಳೂರು: ಬೈಕ್ ಅಪಘಾತ; ಯುವಕ ಸ್ಥಳದಲ್ಲೇ ಮೃತ್ಯು
ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿದ ಸಾರ್ವಜನಿಕರು

ಮಂಗಳೂರು, ಸೆ.1: ಶಕ್ತಿನಗರದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದು, ಬೈಕ್ ಹಿಂಬದಿ ಸವಾರ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಜೆ ನಡೆದಿದೆ.
ಬೈಕ್ ಸವಾರ ಶಕ್ತಿನಗರ ನಿವಾಸಿ ಮನೋಜ್ (22) ಮೃತಪಟ್ಟವರು. ಹಿಂಬದಿ ಸವಾರ ಸುಹಾಸ್ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೋಜ್ ಮತ್ತು ಸುಹಾಸ್ ಮಂಗಳೂರಿನ ಟಾಟಾ ಮೋಟರ್ಸ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ರವಿವಾರ ಸಂಜೆ ಗಣೇಶೋತ್ಸವಕ್ಕೆ ಬೇಕಾದ ಸಾಮಗ್ರಿ ಖರೀದಿಸಲೆಂದು ಇಬ್ಬರೂ ಬರುತ್ತಿರುವಾಗ ಬೈಕ್ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದಿದೆ. ಗಂಭೀರ ಗಾಯಗೊಂಡ ಮನೋಜ್ ಮೃತರಾದರು. ವೇಗವಾಗಿದ್ದ ಬೈಕ್ ಸ್ಕಿಡ್ ಆದ ರಭಸಕ್ಕೆ ಸಮೀಪದ ಕಾಂಪೌಂಡ್‌ಗೆ ಬಡಿದು ಬಿದ್ದಿದೆ.
ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ದಯಿ ಸಾರ್ವಜನಿಕರು: ಬೈಕ್ ಸ್ಕಿಡ್ ಆಗಿ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಮನೋಜ್ ಸ್ಥಳದಲ್ಲೇ ಚೀರಾಡುತ್ತಿದ್ದರು. ಗಾಯಾಳುವಿನ ನರಳಾಟ ಕಂಡೂ ಕಾಣದ ರೀತಿಯಲ್ಲಿ ಸಾರ್ವಜನಿಕರು ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು. ಗಾಯಾಳು ಮನೋಜ್ 10 ನಿಮಿಷ ತೀವ್ರ ಯಾತನೆ ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದರು. ಸ್ಥಳೀಯರು ಕೂಡಲೇ ಎಚ್ಚೆತ್ತುಕೊಂಡಿದ್ದರೆ ಗಾಯಾಳುವಿನ ಪ್ರಾಣ ಉಳಿಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.







