ಬೆಳ್ತಂಗಡಿ ತಾಲೂಕಿನಲ್ಲಿ ನಿರಂತರ ಮಳೆ : ಮತ್ತೆ ಆತಂಕದಲ್ಲಿ ಮಲೆನಾಡಿನ ಜನರು
ದೊಡ್ಡಮಟ್ಟದಲ್ಲಿ ಬಿರುಕು ಬಿಟ್ಟ ಭೂಮಿ

ಬೆಳ್ತಂಗಡಿ: ತಾಲೂಕಿನಲ್ಲಿ ರವಿವಾರ ಬೆಳಗ್ಗಿನಿಂದ ಭಾರೀ ಮಳೆ ಸುರಿಯಲಾರಂಭಿಸಿದ್ದು, ರಾತ್ರಿಯೂ ಮುಂದುವರಿದಿದೆ. ಮಲೆನಾಡಿನ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಮತ್ತೆ ಭಯ ಮೂಡಿಸಿದೆ.
ಪ್ರವಾಹ ಹಾಗೂ ಭೂ ಕುಸಿತಗಳ ಬಳಿಕ ಒಂದಿಷ್ಟು ವಿರಾಮ ನೀಡಿದ್ದ ಮಳೆ ಶನಿವಾರ ಮತ್ತೆ ಚುರುಕಾಗುತ್ತಾ ಬಂದಿತ್ತು. ರವಿವಾರ ಬೆಳಗ್ಗಿನಿಂದಲೇ ನಿರಂತರವಾಗಿ ಸುರಿಯುತ್ತಿದೆ. ನದಿಗಳಲ್ಲಿ ಇಳಿದಿದ್ದ ನೀರಿನ ಮಟ್ಟ ಮತ್ತೆ ಏರಲಾರಂಭಿಸಿದೆ.
ನಿರಂತರ ಭೂ ಕುಸಿತದಿಂದಾಗಿ ತತ್ತರಿಸಿ ಹೋಗಿರುವ ದಿಡುಪೆ, ಕೊಲ್ಲಿ ಪರಿಸರದಲ್ಲಿ ಹಾಗೂ ಚಾರ್ಮಾಡಿ ಪ್ರದೇಶದಲ್ಲಿ ಜನ ಭಯದಿಂದಲೇ ಮಳೆಯನ್ನು ನೋಡುತ್ತಿದ್ದಾರೆ. ದಿಡುಪೆಯ ಗಣೇಶ ನಗರ ಪ್ರದೇಶದಲ್ಲಿ ಹಾಗೂ ಮಕ್ಕಿ ಪರ್ಲ ಪ್ರದೇಶಗಳಲ್ಲಿ ಹಾಗೂ ನಾವೂರು ಪ್ರದೇಶಗಳಲ್ಲಿ ಭೂಮಿ ದೊಡ್ಡಮಟ್ಟದಲ್ಲಿ ಬಿರುಕು ಬಿಟ್ಟಿದ್ದು ಇದು ಜನರಲ್ಲಿ ಹೆಚ್ಚಿನ ಭಯಕ್ಕೆ ಕಾರಣವಾಗಿದೆ.
ಮಕ್ಕಿ ಪರ್ಲ ಪ್ರದೇಶದಲ್ಲಿ ಭೂಮಿಯ ಒಳಗಿನಿಂದ ಬಣ್ಣ ಹಾಗೂ ವಾಸನೆಯಿರುವ ನೀರು ಹೊರಬರುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದು ಏನು ಮಾಡಬೇಕು ಎಂದು ತಿಳಿಯದೆ ಸಂಕಷ್ಟದಲ್ಲಿದ್ದಾರೆ, ಹೊರನೋಟಕ್ಕೆ ನೀರಿನಲ್ಲಿ ಖನಿಜದ ಅಂಶ ಸೇರಿಕೊಂಡಿರುವುದು ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಹಿಂದೆ ಎಂದೂ ಇಂತಹ ಅನುಭವಗಳಾಗಿಲ್ಲ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಭೂಮಿಯ ಒಳಗೆ ಹೆಚ್ಚಿನ ಬಿರುಕುಗಳು ಇವೆಯೇ ಎಂಬ ಭಯವೂ ಇವರನ್ನು ಕಾಡುತ್ತಿದೆ. ಈ ಪ್ರದೇಶಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಕೃಷಿ ಹಾನಿಯ ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಎಲ್ಲರ ತೋಟಗಳೂ ಕೊಚ್ಚಿ ಹೋಗಿದೆ ಆದರೆ ಯಾರ ಮನೆಗೂ ಹಾನಿಯಾಗಿಲ್ಲ ಇದರಿಂದಾಗಿ ಇವರು ಯಾರಿಗೂ ಪ್ರವಾಹ ಸಂತ್ರಸ್ಥರಿಗೆ ದೊರಕುವ ಯಾವುದೇ ಪರಿಹಾರಗಳು ದೊರೆತಿಲ್ಲ. ಒಂದಿಷ್ಟು ಅಕ್ಕಿ ಸಾಮಾನುಗಳು ದೊರೆತಿದೆ ಇದರಿಂದ ನಾವು ಹೇಗೆ ಬದುಕನ್ನು ನಡೆಸಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ ಇಲ್ಲಿನ ಜನರು.
ಪ್ರವಾಹದಿಂದಾಗಿ ಸೇತುವೆ ಕೊಚ್ಚಿ ಹೋಗಿರುವ ಅನಾರು ಹಾಗೂ ಸಮೀಪದ ವಾಸಿಗಳಿಗೆ ಸಹಾಯಕವಾಗುವ ರೀತಿಯಲ್ಲಿ ಇಲ್ಲಿ ಸಮೀಪ ನಲ್ಲಿಲು ಎಂಬಲ್ಲಿ ತಾತ್ಕಲಿಕವಾಗಿ ಮರದ ಪಾಪೊಂದನ್ನು ನಿರ್ಮಿಸುವ ಪ್ರಯತ್ನ ಎಸ್ಕೆಎಸ್‍ಎಸ್‍ಎಫ್‍ನ ವಿಖಾಯ ತಂಡದವರು ಸ್ಥಳೀಯರ ಸಹಕಾರದೊಂದಿಗೆ ನಡೆಸಿದ್ದರು. ತಾತ್ಕಾಲಿಕ ಸೇತುವೆಯ ನಿರ್ಮಾಣ ಬಹುತೇಕ ಯಶಸ್ವಿಯಾದರೂ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಕಾರಣದಿಂದಾಗಿ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮರದ ಪಾಪನ್ನು ಹಾಕಿದರೆ ಕನಿಷ್ಟ ಇಲ್ಲಿಂದ ಅಗತ್ಯ ಕೆಲಸಗಳಿಗೆ ಹೊರಗೆ ಬರುವುದಕ್ಕಾದರೂ ಇವರಿಗೆ ಸಹಾಯವಾಗುತ್ತಿತ್ತು ಎಂದು ಸ್ಥಳೀಯ ಜನರು ಅಭಿಪ್ರಾಯ ಪಡುತ್ತಿದ್ದಾರೆ.









