ಆನ್ ಲೈನ್ ನಲ್ಲಿಯೇ ಹಳೆಯ ಫೋಟೋ ಬದಲಾಯಿಸಿ ಕಲರ್ ವೋಟರ್ ಐಡಿ ಪಡೆಯಿರಿ

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಶೇ. 1ಕ್ಕಿಂತಲೂ ಹೆಚ್ಚು ನಕಲಿ ಮತದಾರರಿದ್ದಾರೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದು, ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರು ಪಟ್ಟಿಯಿಂದ ನಕಲಿ ಹೆಸರುಗಳನ್ನು ತೆಗೆದುಹಾಕಲು ಸಹಕರಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.
ವಾರ್ತಾ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯದ ಚುನಾವಣಾ ಪಟ್ಟಿಯಲ್ಲಿ ಲಿಂಗ ಅಸಮಾನತೆ ಸರಿಯಾಗಿದೆ. ಪುರುಷ-ಮಹಿಳೆ ಮತದಾರರ ಸಂಖ್ಯೆ ಸಾವಿರಕ್ಕೆ 979 ಇದೆ. ಯುವ ಮತದಾರರ ಸಂಖ್ಯೆಯ ಸಮಸ್ಯೆಯಿದ್ದು, ಅರ್ಹರ ಸಂಖ್ಯೆ 11 ಲಕ್ಷಕ್ಕೂ ಅಧಿಕವಿದೆ ಎಂದರು.
ಮೊದಲ ಬಾರಿಗೆ ಚುನಾವಣಾ ಆಯೋಗ ಎಪಿಕ್(ಓಟರ್)ಗೆ ಹತ್ತು ಹದಿನೈದು ವರ್ಷಗಳ ಹಿಂದೆ ನೀಡಿರುವ ಹಳೆಯ ಫೋಟೋ ಬದಲಾಯಿಸಿ ಈಗಿನ ಕಲರ್ ಫೋಟೋ ಆನ್‌ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಫೋಟೋ ಬದಲಾವಣೆ ಅಥವಾ 2-3 ಕಡೆಗಳಲ್ಲಿ ಹೆಸರು ಇದ್ದಲ್ಲಿ ಸರಿ ಪಡಿಸಿಕೊಳ್ಳಲು ಉತ್ತಮ ಅವಕಾಶವಿದೆ. ಸಾರ್ವಜನಿಕರು ಈ ಅವಕಾಶವನ್ನು ತಪ್ಪದೇ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿಹ್ನಾ ಮಾತನಾಡಿ, ಓಟರ್ ಐಡಿಯಲ್ಲಿರುವ ಹಳೆ ಫೋಟೋ ಬದಲಾವಣೆಗೆ ಅವಕಾಶ ಇದೆ. ಹಾಗೆಯೇ ಒಂದು ಕುಟುಂಬದ ಎಲ್ಲ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಸೇರಿಸಲು ಅವಕಾಶ ಇದೆ. ಮತದಾರರು ಆನ್‌ಲೈನ್ ಮೂಲಕವೇ ಇದನ್ನು ಮಾಡಿಕೊಳ್ಳಬಹುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾ ಆಯುಕ್ತ ಕೆ.ಎನ್. ರಮೇಶ್, ಪಿ.ಎಸ್.ವಸ್ತ್ರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







