ಕಾರ್ ಮೇಲೆ ಬಾಂಬ್ ದಾಳಿ; ಬಾಂಗ್ಲಾ ಸಚಿವ ಪಾರು

ಢಾಕಾ,ಸೆ.1: ಹತ್ಯಾಯತ್ನವೊಂದರಲ್ಲಿ ಬಾಂಗ್ಲಾದೇಶದ ಸಚಿವ ತಾಜುಲ್ ಇಸ್ಲಾಮ್ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಶಂಕಿತ ಉಗ್ರರು ರವಿವಾರ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ದಾಳಿಯ ಹೊಣೆಯನ್ನು ಐಸಿಸ್ ಭಯೋತ್ಪಾದಕ ಗುಂಪು ವಹಿಸಿಕೊಂಡಿದೆ.
ಸ್ಥಳೀಯಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ತಾಜುಲ್ ಇಸ್ಲಾಮ್ ಅವರಿದ್ದ ಕಾರು ಢಾಕಾದ ವಿಜ್ಞಾನ ಪ್ರಯೋಗಾಲಯ ಸಂಸ್ಥೆಯ ಕಟ್ಟಡದ ಸಮೀಪದಲ್ಲಿರುವ ಇಂಟರ್‌ಸೆಕ್ಷನ್‌ನಲ್ಲಿ ಹಾದುಹೋಗುತ್ತಿದ್ದಾಗ ಶಂಕಿತ ಉಗ್ರರು ಬಾಂಬ್ ಎಸೆದಿದ್ದಾರೆಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಸ್ಟಾರ್ ವರದಿ ಮಾಡಿದೆ. ದಾಳಿಯಿಂದ ಸಚಿವರು ಪಾರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಚಿವರ ಭದ್ರತಾ ತಂಡದಲ್ಲಿ ಆರು ಮಂದಿ ಪೊಲೀಸರಿದ್ದರು ಹಾಗೂ ಸಚಿವರು ಬಾಂಗ್ಲಾದೇಶ ಗಡಿಭದ್ರತಾಪಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾಗ ಅವರ ಮೇಲೆ ಬಾಂಬ್ ದಾಳಿ ನಡೆದಿದೆಯೆಂದು ವರದಿಗಳು ತಿಳಿಸಿವೆ.
ಇಂಟರ್‌ಸೆಕ್ಷನ್ ಬಳಿ ಕಾರು ಹಾದುಹೋಗುತ್ತಿದ್ದಾಗ ಸಂಚಾರ ದಟ್ಟಣೆಯಿತ್ತು. ಆಗ ಬೆಂಗಾವಲು ವಾಹನದಲ್ಲಿದ್ದ ಎಎಸ್‌ಐ ಎ.ಬಿ. ಶಹಾಬುದ್ದೀನ್, ಅವರು ಕೆಳಗಿಳಿದು ಸಚಿವರಿಗಾಗಿ ರಸ್ತೆ ತೆರವುಗೊಳಿಸುವಂತೆ ಸಂಚಾರಿ ಪೊಲೀಸರಿಗೆ ತಿಳಿಸಿದಾಗ, ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಎಎಸ್‌ಐ ಎ.ಬಿ.ಶಹಾಬುದ್ದೀನ್ ಅವರಿಗೂ ಗಾಯಗಳಾಗಿವೆ. ಆದಾಗ್ಯೂ ದಾಳಿಗೊಳಗಾದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಚಿವರ ಹೆಸರನ್ನು ಈ ತನಕ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.







