ಸೆ.2 ರಿಂದ ಎ-ಡಬ್ಲೂಇಬಿ ಸಾಮಾನ್ಯ ಸಭೆ
ಅಂತರ್‌ರಾಷ್ಟ್ರೀಯ ಚುನಾವಣಾ ವ್ಯವಸ್ಥೆ ಕುರಿತು ಚರ್ಚೆ

ಬೆಂಗಳೂರು, ಸೆ.1: ಅಂತರ್‌ರಾಷ್ಟ್ರೀಯ ಮಟ್ಟದ ಚುನಾವಣಾ ಸಂಸ್ಥೆಗಳ ಅಸೋಸಿಯೇಷನ್(ಎ-ಡಬ್ಲೂಇಬಿ)ನ ಸಾಮಾನ್ಯ ಸಭೆಯು ಸೆ.2 ರಿಂದ 4 ರವರೆಗೆ ನಡೆಯಲಿದ್ದು, ವಿವಿಧ ದೇಶಗಳ ಚುನಾವಣಾ ವ್ಯವಸ್ಥೆಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹಾ ಹೇಳಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2013 ರಲ್ಲಿ ಸೌತ್ ಕೊರಿಯಾದಲ್ಲಿ ಆರಂಭವಾದ ಸಂಸ್ಥೆಯು ಪ್ರತಿ ಎರಡು ವರ್ಷಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸುತ್ತದೆ. ಈ ಸಭೆಯಲ್ಲಿ ಸಂಸ್ಥೆಯನ್ನು ಮುನ್ನಡೆಸುವವರು ಚುನಾಯಿತರಾಗಲಿದ್ದಾರೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವ ಪಡೆದಿದೆ ಎಂದರು.
ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಕುರಿತ ಉಪಕ್ರಮ ಹಾಗೂ ಸವಾಲುಗಳ ಬಗ್ಗೆ ವಿಸ್ತೃತವಾದ ಚರ್ಚೆಗಳು ನಡೆಯಲಿವೆ ಎಂದು ಉಮೇಶ್ ಸಿನ್ಹಾ ಮಾಹಿತಿ ನೀಡಿದರು.
ಚುನಾವಣಾ ವ್ಯವಸ್ಥೆ ಬಲಪಡಿಸುವುದು ಹಾಗೂ ಪಾರದರ್ಶಕತೆ, ಗುಣಾತ್ಮಕವಾಗಿ ಚುನಾವಣೆಗಳನ್ನು ನಡೆಸುವ ಬಗೆಯ ಕುರಿತು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಪ್ರತಿನಿಧಿಗಳು ಚರ್ಚಿಸಲಿದ್ದಾರೆ. ಹಾಗೂ ಮುಂದಿನ ಎರಡು ವರ್ಷಗಳವರೆಗೆ ಹೇಗೆ ಕಾರ್ಯ ನಿರ್ವಹಣೆಯಾಗಬೇಕು ಎಂಬ ಅಂಶದ ಕುರಿತು ಸ್ಪಷ್ಟವಾದ ನಿಲುವು ಕೈಗೊಳ್ಳಲಿದೆ ಎಂದು ವಿವರಿಸಿದರು.
ಅಂತರ್‌ರಾಷ್ಟ್ರೀಯ ಸಂಸ್ಥೆಯಾಗಿರುವ ಇದರಲ್ಲಿ 115 ಸದಸ್ಯ ಹಾಗೂ ಸದಸ್ಯೇತರ ರಾಷ್ಟ್ರಗಳು, 20 ಪ್ರಾದೇಶಿಕ ಚುನಾವಣಾ ಸಂಸ್ಥೆಗಳು ಸದಸ್ಯತ್ವ ಪಡೆದಿವೆ. ಅದರಲ್ಲಿ 24 ಏಷ್ಯಾ, 37 ಆಫ್ರಿಕಾ, 31 ಅಮೆರಿಕಾ, 17 ಯೂರೋಪ್ ಸೇರಿದಂತೆ ಮತ್ತಿತರೆ ಕಡೆಗಳಿಂದ ಪ್ರತಿನಿಧಿಗಳಿದ್ದು, ಅಲ್ಲಿಂದ ಆಯ್ದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಭಾರತದ ಚುನಾವಣಾ ವ್ಯವಸ್ಥೆ ಸುಧಾರಣೆ ಸಾಧ್ಯತೆಗಳ ಕುರಿತು ಚರ್ಚೆಯ ಅಗತ್ಯವಿದೆ ಎಂದ ಅವರು, ನಮ್ಮ ದೇಶದಿಂದ ವಿವಿಧ 90 ದೇಶಗಳಿಗೆ ತರಬೇತಿ ಹಾಗೂ ಸಾಮರ್ಥ್ಯ ವೃದ್ಧಿ ಕುರಿತು ಸವಿಸ್ತರಾದವಾಗಿ ವಿವರಿಸಲಾಗಿದೆ. ಅಲ್ಲದೆ, ಇದೀಗ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳ ಅಲೆ ಸೃಷ್ಟಿಯಾಗಿದೆ. ಈ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದರು.
ಒಂದು ದೇಶ-ಒಂದು ಚುನಾವಣೆ ಕುರಿತು ಚಿಂತನೆ
ಇಡೀ ದೇಶದಲ್ಲಿ ಪ್ರಧಾನಿ ಮೋದಿ ಒಂದು ದೇಶ, ಒಂದು ಚುನಾವಣೆ ಕುರಿತು ಪ್ರಸ್ತಾಪ ಮಾಡುತ್ತಿದ್ದಾರೆ. ಈ ಸಂಬಂಧ ಚರ್ಚೆ ನಡೆಯುತ್ತದೆಯಾ ಎಂಬುದರ ಕುರಿತು ಪ್ರಸ್ತಾಪಿಸಿದ ಉಮೇಶ್ ಸಿನ್ಹಾ, ಈ ರೀತಿಯ ವ್ಯವಸ್ಥೆಯು ಬೇರೆ ಬೇರೆ ದೇಶಗಳಲ್ಲಿದೆ. ಭಾರತದ ಸಂದರ್ಭದಲ್ಲಿ ಇದರ ಸಾಧ್ಯತೆಗಳ ಬಗ್ಗೆ ಇಲ್ಲಿಯೂ ಚರ್ಚೆಯಾಗುವ ಸಾಧ್ಯತೆಯಿದೆ. ಆದರೆ, ನಾವದನ್ನು ಯಾವುದೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದರು.