17ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು: ಡಿಸಿಎಂ ಲಕ್ಷ್ಮಣ ಸವದಿ
ಉಪ ಚುನಾವಣೆ

ಬೆಳಗಾವಿ, ಸೆ.1: ಅಥಣಿ ಮತ್ತು ಕಾಗವಾಡ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದು ನನ್ನ ಮುಂದಿನ ಗುರಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ರವಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ 17 ಮತಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಇದಕ್ಕಾಗಿ ಬಿಜೆಪಿ ಕಾರ್ಯಕರ್ತರು, ನಾಯಕರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇದ್ದರೆ ಹೈಕಮಾಂಡ್ ಕೈಬಿಡುವುದಿಲ್ಲ ಎನ್ನುವುದಕ್ಕೆ ನಾನೇ ನಿದರ್ಶನ. ವರಿಷ್ಠರ ವಿಶ್ವಾಸಕ್ಕೆ ಪೂರಕವಾಗಿ ಶ್ರದ್ಧೆ ನಿಷ್ಠೆಯಿಂದ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತೇನೆ. ಅಪಾರವಾದ ವಿಶ್ವಾಸವಿಟ್ಚು ಉನ್ನತ ಜವಾಬ್ದಾರಿಯನ್ನು ವಹಿಸಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡು 2023ರ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವಂತೆ ಸುಭದ್ರವಾಗಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಅವರು ಹೇಳಿದರು.
ಚುನಾವಣೆ ರಹಸ್ಯ ಕಾರ್ಯತಂತ್ರ: ಮುಂದಿನ ಚುನಾವಣೆಯಲ್ಲಿ ರಹಸ್ಯ ಕಾರ್ಯತಂತ್ರವನ್ನು ರೂಪಿಸಿ ನಮ್ಮ ಪಕ್ಷ ವಿಜಯಿಯಾಗುವಂತೆ ಯತ್ನಿಸಲಾಗುವುದು.ಈ ಕಾರ್ಯತಂತ್ರಗಳನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿ ಅವುಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು
ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜನ-ಜಾನುವಾರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಆಸ್ತಿಪಾಸ್ತಿ ನಷ್ಟವಾಗಿದೆ. ಸಂತ್ರಸ್ತ ಜನರಿಗೆ ಆರಂಭಿಕವಾಗಿ ಹತ್ತು ಸಾವಿರ ರೂ. ನೀಡುತ್ತಿದೆ. ಮನೆ ಬಾಡಿಗೆಗಾಗಿ ಪ್ರತಿ ತಿಂಗಳು ಸಂತ್ರಸ್ತ ಜನತೆಗೆ ಐದು ಸಾವಿರ ರೂ. ಬಾಡಿಗೆ ನೀಡಲಾಗುತ್ತಿದೆ. ಮನೆ ಕಟ್ಟಲು ಐದು ಲಕ್ಷ ರೂ.ನೀಡುತ್ತಿದೆ. ಇಷ್ಟೊಂದು ಹಣ ಈ ಮೊದಲಿನ ಯಾವ ಸರಕಾರಗಳು ನೀಡಿಲ್ಲ. ಸುಮ್ಮನೆ ಆರೋಪ ಮಾಡುವ ವಿರೋಧ ಪಕ್ಷಗಳಿಗೆ ನೈತಿಕ ಹಕ್ಕಿಲ್ಲ ಎಂದು ಅವರು ಹೇಳಿದರು.
ನೆರೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರದ ಮೊತ್ತ ವಿತರಣೆಯಾಗಿದೆ. ಇನ್ನು ಕೇವಲ ಶೇ.5ರಷ್ಟು ಬಾಕಿ ಇದೆ. ಮೊದಲ ಹಂತದಲ್ಲಿ ದೊಡವಾಡ, ಜನವಾಡ, ಮಹಿಷವಾಡಗಿ, ನಂದೇಶ್ವರ ಗ್ರಾಮಗಳನ್ನು ಸ್ಥಳಾಂತರಿಸುವ ಯೋಚನೆಯಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುಶೀಲ್ ಕುಮಾರ ಪತ್ತಾರ, ತಾಲೂಕಿನ ಎಲ್ಲ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ನನಗೆ ದೊರೆತಿರುವ ಉಪಮುಖ್ಯಮಂತ್ರಿ ಹುದ್ದೆ, ಕೇವಲ ನನಗೆ ಮಾತ್ರ ದೊರೆತ ಗೌರವವಲ್ಲ. ಸಮಸ್ತ ಅಥಣಿ ತಾಲೂಕಿನ ಜನತೆಗೆ ಸಂದ ಗೌರವವಾಗಿದೆ ಈ ನಾಡಿನ ಜನತೆಗೆ ದೊರೆತ ಗೌರವವಾಗಿದೆ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ







