ಅಸ್ಸಾಂ ಎನ್‌ಆರ್‌ಸಿಯಿಂದ ಹೊರಗುಳಿದವರು ರಾಷ್ಟ್ರ ರಹಿತರಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಹೊಸದಿಲ್ಲಿ, ಸೆ. 1: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಿಂದ ಹೊರಗುಳಿದವರು ರಾಷ್ಟ್ರ ರಹಿತರಲ್ಲ. ಕಾನೂನು ಪರಿಹಾರಗಳು ಮುಗಿಯುವವರೆಗೆ ಅವರು ಪ್ರಜೆಯ ಎಲ್ಲ ಹಕ್ಕುಗಳನ್ನು ಅನುಭವಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರವಿವಾರ ಹೇಳಿದೆ.
ಶನಿವಾರ ಪ್ರಕಟಿಸಲಾದ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಲ್ಲಿ 19 ಲಕ್ಷಕ್ಕೂ ಅಧಿಕ ಜನರು ಹೊರಗುಳಿದಿದ್ದಾರೆ. ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯ ನಿರ್ದಿಷ್ಟ ಅಂಶಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ಒಂದು ವಿಭಾಗದ ವ್ಯಾಖ್ಯಾನಗಳಿಗೆ ಪ್ರತಿಕ್ರಿಯೆಯಾಗಿ ಸಚಿವಾಲಯ ಈ ಹೇಳಿಕೆ ನೀಡಿದೆ.
ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಹೊರಗುಳಿದರೂ ಅಸ್ಸಾಂ ನಿವಾಸಿಗಳ ಹಕ್ಕುಗಳಿಗೆ ಯಾವುದೇ ತೊಡಕು ಉಂಟಾಗದು ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ‘‘ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದವರನ್ನು ಬಂಧಿಸುವುದಿಲ್ಲ. ಕಾನೂನು ಅಡಿಯಲ್ಲಿ ಲಭ್ಯವಿರುವ ಎಲ್ಲ ಪರಿಹಾರಗಳು ಮುಗಿಯುವವ ವರೆಗೆ ಅವರು ಹಿಂದಿನ ಎಲ್ಲ ಹಕ್ಕುಗಳನ್ನು ಅನುಭವಿಸಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಪಟ್ಟಿಯಿಂದ ಹೊರಗುಳಿದ ಜನರು ಕಾನೂನಾತ್ಮಕ ಅರ್ಥದಲ್ಲಿ ‘ವಿದೇಶಿಗರು’ ಎಂದಾಗುವುದಿಲ್ಲ. ಅವರು ಈ ಹಿಂದೆ ಅನುಭವಿಸಿದ ಯಾವುದೇ ಹಕ್ಕುಗಳು ಅಥವಾ ಅನುಕೂಲಗಳಿಂದ ವಂಚಿತರಾಗುವುದಿಲ್ಲ ಎಂದು ಕುಮಾರ್ ತಿಳಿಸಿದ್ದಾರೆ.







