ಬಂಟ್ವಾಳ ಬಂಟರ ಸಂಘ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಬಂಟ್ವಾಳ : ಬಂಟ್ವಾಳ ಬಂಟರ ಸಂಘ ಸ್ವಾಮಿ ವಿವೇಕಾನಂದರ ವಾಣಿಯನ್ನು ಪಾಲನೆ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರವಿವಾರ ಸಂಜೆ ಬಂಟ್ವಾಳ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮುಂಬೈನ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಲಿಮಿಟೆಡ್ ಸಹಯೋಗದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ತುಂಬೆಯಲ್ಲಿರುವ ಬಂಟ್ವಾಳ ಬಂಟರ ಸಂಘ ದಲ್ಲಿ ವಿದ್ಯಾರ್ಥಿವೇತನ ವಿತರಿಸಿ, ತನಗೆ ದೊರೆತ ಸನ್ಮಾನಕ್ಕೆ ಉತ್ತರಿಸಿ ಅವರು ಮಾತನಾಡಿದರು.
ಬಡತನ ಮತ್ತು ಶಿಕ್ಷಣಕ್ಕೆ ಜಾತಿ, ಮತಗಳಿಲ್ಲ ಎಂದ ಅವರು, ಸಾಮಾಜಿಕವಾಗಿ ನೆರವಾಗುವುದು ದೇವರ ಕೆಲಸ ಎಂದರು. ಆರೆಸ್ಸೆಸ್ ನಡಿ ಬೆಳೆದು ಸಾಮಾನ್ಯ ಕಾರ್ಯಕರ್ತನಾಗಿ ತಾನು ಸಂಸದನಾಗಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಹೊಂದಲು ಸಾಧ್ಯವಾಗಲು ಮತದಾರರ ಆಶೀರ್ವಾದವಿದೆ. ಜಿಲ್ಲೆಯ ಕೀರ್ತಿಯನ್ನು ಎತ್ತರಿಸುವ ಕೆಲಸ ಮಾಡುತ್ತೇನೆ, ಮಂಗಳೂರಿನ ಬಂಟರ ಅಪೇಕ್ಷೆಯಂತೆ ರಸ್ತೆಗೆ ಬಂಟ ಸಮುದಾಯದ ಪ್ರಮುಖ ಮೂಲ್ಕಿ ಸುಂದರರಾಮ ಶೆಟ್ಟರ ಹೆಸಡಿರುವುದು ಖಚಿತ ಎಂದು ಹೇಳಿದರು.
ಶ್ರೀ ದೇವಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿ, ಬಂಟ ಸಮುದಾಯದ ಪ್ರಮುಖರಾದ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ಮಂಗಳೂರಿನ ರಸ್ತೆಗೆ ಇಡಲು ನಳಿನ್ ಅವರಿಂದ ಸಾಧ್ಯ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶ್ರೀ ದೇವಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಅಲ್ ಕಾರ್ಗೊ ಲಾಜಿಸ್ಟಿಕ್ ನ ಸಿಎಸ್ ಆರ್ ಮುಖ್ಯಾಧಿಕಾರಿ ಡಾ.ನೀಲ್ ರತನ್ ಆರ್. ಶೆಂಡೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, 40 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಒಟ್ಟು 1,100 ಮಂದಿಗೆ ನೀಡಲಾಗುತ್ತಿದ್ದು, ಇವರಲ್ಲಿ 650 ಬಂಟ ಸಮುದಾಯದವರಾದರೆ, ಉಳಿದವರು ಇತರ ಎಲ್ಲ ಸಮುದಾಯಕ್ಕೆ ಸೇರಿದವರು ಎಂದರು.
ಇದೇ ವೇಳೆ ನಳಿನ್ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು. ಎ.ಜೆ. ವೈದ್ಯಕೀಯ ಸಂಸ್ಥೆಯ ಎಂ.ಡಿ. ಡಾ. ಪ್ರಶಾಂತ್ ಮಾರ್ಲ ಸನ್ಮಾನ ಪತ್ರ ವಾಚಿಸಿದರು. ಈ ಸಂದರ್ಭ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ಖಜಾಂಚಿ ಜಗದೀಶ ಶೆಟ್ಟಿ ಇರಾಗುತ್ತು, ಸಹಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ, ಮಹಿಳಾ ವಿಭಾಗ ಅಧ್ಯಕ್ಷೆ ಆಶಾ ಪ್ರಸಾದ್ ರೈ ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಮುಖ್ಯಮಂತ್ರಿ ನೆರೆ ಸಂತ್ರಸ್ತರ ನಿಧಿಗೆ ಪ್ರಪುಲ್ಲ ರೈ ಅವರ ಮೂಲಕ 2 ಲಕ್ಷಕ್ಕಿಂತಲೂ ಅಧಿಕ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.







