ಎರಡನೇ ಟೆಸ್ಟ್: ಹನುಮ ವಿಹಾರಿ ಶತಕ ಬುಮ್ರಾ ಹ್ಯಾಟ್ರಿಕ್, ಭಾರತದ ಬಿಗಿ ಹಿಡಿತ

ಕಿಂಗ್ಸ್‌ಸ್ಟನ್, ಸೆ.1: ಹನುಮ ವಿಹಾರಿ ಸಿಡಿಸಿದ ಚೊಚ್ಚಲ ಶತಕ ಹಾಗೂ ಜಸ್‌ಪ್ರೀತ್ ಬುಮ್ರಾ ಪಡೆದ ಹ್ಯಾಟ್ರಿಕ್ ವಿಕೆಟ್ ಬಲದಿಂದ ಪ್ರವಾಸಿ ಭಾರತ ತಂಡ ಆತಿಥೇಯ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಎರಡನೇ ದಿನದಾಟವಾದ ಶನಿವಾರ ಮತ್ತೊಮ್ಮೆ ಬಿರುಗಾಳಿ ಬೌಲಿಂಗ್(16 ರನ್‌ಗೆ 6 ವಿಕೆಟ್)ಸಂಘಟಿಸಿದ ಬುಮ್ರಾ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.
ಬುಮ್ರಾ ದಾಳಿಗೆ ತರಗೆಲೆಯಂತೆ ಉದುರಿದ ವಿಂಡೀಸ್ ತಂಡ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 33 ಓವರ್‌ಗಳಲ್ಲಿ 87 ರನ್ ಗಳಿಸುವಷ್ಟರಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಫಾಲೋ-ಆನ್‌ಗೆ ಸಿಲುಕುವ ಭೀತಿಯಲ್ಲಿದೆ.
ಏಳನೇ ಓವರ್‌ನಲ್ಲಿ ವಿಂಡೀಸ್ ಆರಂಭಿಕ ಆಟಗಾರ ಜಾನ್ ಕ್ಯಾಂಪ್‌ಬೆಲ್ ವಿಕೆಟನ್ನು ಉರುಳಿಸಿದ ಬುಮ್ರಾ ವಿಕೆಟ್ ಪತನಕ್ಕೆ ನಾಂದಿ ಹಾಡಿದರು. ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಡರೆನ್ ಬ್ರಾವೊ, ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ವಿಕೆಟ್‌ಗಳನ್ನು ಉರುಳಿಸಿ ಹ್ಯಾಟ್ರಿಕ್ ಪೂರೈಸಿದರು. ಈ ಮೂಲಕ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ನೋಂದಾಯಿಸಿದರು.
ಬುಮ್ರಾ ಅವರ ಮೊದಲ ಎಸೆತದಲ್ಲಿ ಬ್ರಾವೊ ಅವರು ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮುಂದಿನ ಎರಡು ಎಸೆತಗಳಲ್ಲಿ ಬೂಕ್ಸ್ ಹಾಗೂ ಚೇಸ್ ಎಲ್ಬಿಡಬ್ಲು ಬಲೆಗೆ ಬಿದ್ದರು. ಬುಮ್ರಾ ಅವರ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಸಾಧನೆಯ ಶ್ರೇಯಸ್ಸು ನಾಯಕ ವಿರಾಟ್ ಕೊಹ್ಲಿಗೆ ಸಲ್ಲಬೇಕಾಗಿದೆ. ಚೇಸ್‌ಗೆ ಆನ್‌ಫೀಲ್ಡ್ ಅಂಪೈರ್ ಪಾಲ್ ರೆಫೆಲ್ ನಾಟೌಟ್ ತೀರ್ಪು ನೀಡಿದಾಗ ಇದನ್ನು ಪ್ರಶ್ನಿಸಿ ಕೊಹ್ಲಿ ಡಿಆರ್‌ಎಸ್ ಮೊರೆ ಹೋದರು. ಡಿಆರ್‌ಎಸ್ ತೀರ್ಪು ಭಾರತದ ಪರವಾಗಿ ಬಂದಿತು.
ಭಾರತದ ಭರವಸೆಯ ವೇಗದ ಬೌಲರ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡರು. ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಈ ಹಿಂದೆ ಈ ಸಾಧನೆ ಮಾಡಿದ್ದರು.
ವಿಂಡೀಸ್ ಪರ ಒಂದಷ್ಟು ಹೋರಾಟ ನೀಡಿದ ಶಿಮ್ರನ್ ಹೆಟ್ಮೆಯರ್‌ಗೆ(34, 57 ಎಸೆತ, 7 ಬೌಂಡರಿ)ಮುಹಮ್ಮದ್ ಶಮಿ ಪೆವಿಲಿಯನ್ ಹಾದಿ ತೋರಿಸಿದರು. ಆಗ ಮತ್ತೊಮ್ಮೆ ದಾಳಿಗಿಳಿದ ಬುಮ್ರಾ ವಿಂಡೀಸ್ ನಾಯಕ ಜೇಸನ್ ಹೋಲ್ಡರ್(18) ವಿಕೆಟನ್ನು ಉರುಳಿಸಿ ವಿಂಡೀಸ್ 78 ರನ್‌ಗೆ 7 ವಿಕೆಟ್ ಕಳೆದುಕೊಳ್ಳಲು ಕಾರಣರಾದರು.
ದಿನದಾಟದಂತ್ಯಕ್ಕೆ ಹ್ಯಾಮಿಲ್ಟನ್(2) ಹಾಗೂ ಕಾರ್ನ್‌ವಾಲ್(ಔಟಾಗದೆ 4)ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದು, ವಿಂಡೀಸ್ 329 ರನ್ ಹಿನ್ನಡೆಯಲ್ಲಿದೆ.
ಭಾರತ 416: ಇದಕ್ಕೂ ಮೊದಲು 5 ವಿಕೆಟ್ ನಷ್ಟಕ್ಕೆ 264 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಹನುಮ ವಿಹಾರಿ ಆಸರೆಯಾದರು. ಜೀವನಶ್ರೇಷ್ಠ ಇನಿಂಗ್ಸ್(111 ರನ್, 225 ಎಸೆತ, 16 ಬೌಂಡರಿ)ಆಡಿದ ವಿಹಾರಿ ಬಾಲಂಗೋಚಿ ಇಶಾಂತ್ ಶರ್ಮಾ(57 ರನ್, 80 ಎಸೆತ)ಅವರೊಂದಿಗೆ 8ನೇ ವಿಕೆಟ್ ಜೊತೆಯಾಟದಲ್ಲಿ 112 ರನ್ ಗಳಿಸಿ ಭಾರತದ ಮೊತ್ತವನ್ನು 440ಕ್ಕೆ ತಲುಪಿಸಿದರು.
ಚೊಚ್ಚಲ ಅರ್ಧಶತಕ ಸಿಡಿಸಿದ ಇಶಾಂತ್ ಬಂಡೆಗಲ್ಲಿನಂತೆ ಕ್ರೀಸ್‌ಗೆ ಅಂಟಿಕೊಂಡು ನಿಂತಿದ್ದ ವಿಹಾರಿಗೆ ಸಮರ್ಥ ಸಾಥ್ ನೀಡಿದರು. ಈ ಇಬ್ಬರು ಆಟಗಾರರು ವಿಂಡೀಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಹಾರಿ ಕ್ರೀಸ್‌ಗೆ ಕಚ್ಚಿಕೊಂಡು ಆಡಿ ಭಾರತ ಬೃಹತ್ ಮೊತ್ತ ದಾಖಲಿಸಲು ನೆರವಾದರು. ರಿಷಭ್ ಪಂತ್(27)ಹೋಲ್ಡರ್(5-77) ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು. ಆಗ ವಿಹಾರಿ ಹಾಗೂ ರವೀಂದ್ರ ಜಡೇಜ 7ನೇ ವಿಕೆಟ್ ಜೊತೆಯಾಟದಲ್ಲಿ 38 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಹೋಲ್ಡರ್ ಎಸೆತವನ್ನು ಬೌಂಡರಿಗಟ್ಟಿದ ವಿಹಾರಿ 96 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
69 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿದ್ದ ಜಡೇಜ ಸ್ಪಿನ್ನರ್ ರಹಕೀಮ್ ಕಾರ್ನ್‌ವಾಲ್‌ಗೆ(3-105)ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಜಡೇಜ ಔಟಾದ ಬೆನ್ನಿಗೇ ವಿಹಾರಿ ಅವರು ಕಾರ್ನ್ ವಾಲ್ ಬೌಲಿಂಗ್‌ನಲ್ಲಿ ಕ್ಯಾಂಪ್‌ಬೆಲ್‌ರಿಂದ ಜೀವದಾನ ಪಡೆದರು. ವಿಂಡೀಸ್ ಗಾಯದ ಮೇಲೆ ಉಪ್ಪು ಸವರಿದ ವಿಹಾರಿ ಕಾರ್ನ್‌ವಾಲ್ ಓವರ್‌ನ ಉಳಿದೆರಡು ಎಸೆತವನ್ನು ಬೌಂಡರಿ ಗೆರೆ ದಾಟಿಸಿದರು.
ಮೊದಲ ಟೆಸ್ಟ್‌ನಲ್ಲಿ 93 ರನ್ ಗಳಿಸಿ ಶತಕವಂಚಿತರಾಗಿದ್ದ ವಿಹಾರಿ 133ನೇ ಓವರ್‌ನಲ್ಲಿ ರೋಚ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವುದರೊಂದಿಗೆ 200 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ಶತಕ ಪೂರೈಸಿದರು. ವಿಹಾರಿಗಿಂತ ತಾನೇನು ಕಡಿಮೆ ಇಲ್ಲವೆಂದು ತೋರಿಸಿಕೊಟ್ಟ ಇಶಾಂತ್ 136ನೇ ಓವರ್‌ನಲ್ಲಿ ಕಾರ್ನ್‌ವಾಲ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿ 69 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಅರ್ಧಶತಕ ಗಳಿಸಿದ ಬೆನ್ನಿಗೆ ತಾಳ್ಮೆ ಕಳೆದುಕೊಂಡ ಇಶಾಂತ್, ಬ್ರಾತ್‌ವೇಟ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಮುಹಮ್ಮದ್ ಶಮಿ ತಾನೆದುರಿಸಿದ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ವಿಹಾರಿ ಕೊನೆಯ ದಾಂಡಿಗನಾಗಿ ಪೆವಿಲಿಯನ್ ಸೇರಿದರು. ವಿಹಾರಿ ವಿಕೆಟ್ ಪಡೆದ ಹೋಲ್ಡರ್ ಭಾರತದ ಇನಿಂಗ್ಸ್‌ಗೆ ತೆರೆ ಎಳೆಯುವ ಜೊತೆಗೆ ಐದು ವಿಕೆಟ್ ಗೊಂಚಲನ್ನು ಪೂರೈಸಿದರು.







