ಕುತೂಹಲ ಕೆರಳಿಸಿದ ಜಮಿಯತ್ ಮುಖ್ಯಸ್ಥರು- ಮೋಹನ್ ಭಾಗ್ವತ್ ಭೇಟಿ

ಮೋಹನ್ ಭಾಗ್ವತ್
ಹೊಸದಿಲ್ಲಿ: ಧ್ರುವೀಕರಣ ಮತ್ತು ಹಿಂದುತ್ವ ರಾಜಕಾರಣದ ಬಗ್ಗೆ ದೇಶಾದ್ಯಂತ ಚರ್ಚೆ ನಡೆದಿರುವ ಬೆನ್ನಲ್ಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು, ಜಮಿಯತ್ ಉಲೇಮಾ ಇ-ಹಿಂದ್ (ಜೆಯುಎಚ್) ಸಂಘಟನೆ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಅವರನ್ನು ಭೇಟಿ ಮಾಡಿ ದೇಶದ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೇಶದಲ್ಲಿ ಕೋಮು ಸಾಮರಸ್ಯ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಜತೆಯಾಗಿ ಕಾರ್ಯನಿರ್ವಹಿಸುವ ಬಗ್ಗೆಯೂ ಉಭಯ ಗಣ್ಯರು ಚರ್ಚಿಸಿದರು ಎನ್ನಲಾಗಿದೆ. ದೆಹಲಿಯಲ್ಲಿರುವ ಆರೆಸ್ಸೆಸ್ ಕಚೇರಿ ಕೇಶವ ಕುಂಜ್ನಲ್ಲಿ ಈ ಸಭೆ ಶನಿವಾರ ನಡೆದಿದೆ ಎಂದು ಆರೆಸ್ಸೆಸ್ ಮೂಲಗಳು ದೃಢಪಡಿಸಿವೆ.
"ಭ್ರಾತೃತ್ವದ ಸಂದೇಶ ಸಾರುವ ಸಲುವಾಗಿ ಆರೆಸ್ಸೆಸ್ ಹಾಗೂ ಜಮಿಯತ್ ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಬರುವ ಸಾಧ್ಯತೆ ಇದೆ. ಆದರೆ ನಿರ್ದಿಷ್ಟ ಯೋಜನೆ ಇನ್ನೂ ಇಲ್ಲವಾದ್ದರಿಂದ ಹೆಚ್ಚಿನದೇನನ್ನೂ ಹೇಳುವಂತಿಲ್ಲ. ಹೇಗಾಗುತ್ತದೆ ಎಂದು ಕಾದುನೋಡೋಣ" ಎಂದು ಮದನಿ ವಿವರಿಸಿದ್ದಾರೆ.
"ಇಂಥ ಚರ್ಚೆಯನ್ನು ನಿಯತವಾಗಿ ನಡೆಸುತ್ತೇವೆ. ಆರೆಸ್ಸೆಸ್ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡುತ್ತದೆ. ಹಿಂದೂ- ಮುಸ್ಲಿಂ ಏಕತೆ ದೃಷ್ಟಿಯಿಂದ ಇದು ಮಹತ್ವದ್ದು. ಈ ಚರ್ಚೆ ಬಗ್ಗೆ ಎರಡೂ ಕಡೆಯವರು ತೃಪ್ತಿ ಹೊಂದಿದ್ದು, ಭವಿಷ್ಯದಲ್ಲಿ ಕೂಡಾ ಇಂಥದ್ದೇ ಮಾತುಕತೆ ಮುಂದುವರಿಸಲು ಒಪ್ಪಿಕೊಂಡಿದ್ದಾರೆ" ಎಂದು ಆರೆಸ್ಸೆಸ್ ಮೂಲಗಳು ಹೇಳಿವೆ.
ವಿ.ಡಿ.ಸಾವರ್ಕರ್ ಮತ್ತು ಎಂ.ಎಸ್.ಗೋಲ್ವಾಳ್ಕರ್ ಅವರ ಸಿದ್ಧಾಂತದ ಹಿನ್ನೆಲೆಯಲ್ಲಿ ಆರೆಸ್ಸೆಸ್ನ ತತ್ವ ಸಿದ್ಧಾಂತಕ್ಕೆ ಜಮಿಯಾತ್ನ ವಿರೋಧ ಇದೆ ಎಂದು ಮದನಿ ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಾಗ್ವತ್, ಹಿಂದುತ್ವ ಎನ್ನುವುದು ಭ್ರಾತೃತ್ವದ ಸಂಕೇತ. ಹಿಂದೂ ಮುಸ್ಲಿಂ ಸಹಬಾಳ್ವೆಯಲ್ಲಿ ಸಾಮರಸ್ಯ ಅಡಗಿದೆ ಎಂದು ಹೇಳಿದರು. ಹಾಗಾದಲ್ಲಿ ಅದಕ್ಕೆ ಜಮಿಯತ್ನ ಒಪ್ಪಿಗೆ ಇದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಎರಡೂ ಸಮುದಾಯದವರು ಜತೆಗೂಡಬಹುದು ಎಂದು ಮದನಿ ವಿವರಿಸಿದ್ದಾಗಿ ಮೂಲಗಳು ತಿಳಿಸಿವೆ.







