ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಎಷ್ಟು ಬೌಲರ್ ಗಳು ಹ್ಯಾಟ್ರಿಕ್ ಗಳಿಸಿದ್ದಾರೆ ಎನ್ನುವುದು ನಿಮಗೆ ಗೊತ್ತೇ ?

ಜಮೈಕಾ, ಸೆ.2: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ರವಿವಾರ ಹ್ಯಾಟ್ರಿಕ್ ಗಳಿಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಸಬೀನಾ ಪಾರ್ಕ್ ನಲ್ಲಿ ಟೆಸ್ಟ್ ನ ಮೂರನೇ ದಿನ ಬುಮ್ರಾ ಅವರು ವಿಂಡೀಸ್ ನ ಡರೆನ್ ಬ್ರಾವೊ ವಿಕೆಟ್ ಉರುಳಿಸುವ ಮೂಲಕ ಟೆಸ್ಟ್ ನಲ್ಲಿ ಮೊದಲ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು.
ಈ ಮೊದಲು ಭಾರತದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಈ ಸಾಧನೆ ಮಾಡಿದ್ದರು. ಹರ್ಭಜನ್ ಸಿಂಗ್ ಮಾ.11, 2001ರಲ್ಲಿ ಕೋಲ್ಕತಾ ಈಡನ್ ಗಾರ್ಡನ್ ನಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ , ಆ್ಯಡಮ್ ಗಿಲ್ ಕ್ರಿಸ್ಟ್ ಮತ್ತು ಶೇನ್ ವಾಟ್ಸನ್ ವಿಕೆಟ್ ಉಡಾಯಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಬೌಲರ್ ಎನಿಸಿಕೊಂಡಿದ್ದರು.
2006, ಜನವರಿ 29ರಂದು ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ಇರ್ಫಾನ್ ಪಠಾಣ್ ಅವರು ಸಲ್ಮಾನ್ ಭಟ್, ಯೂನಿಸ್ ಖಾನ್ ಮತ್ತು ಮುಹಮ್ಮದ್ ಯೂಸುಫ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿ ಹ್ಯಾಟ್ರಿಕ್ ದಾಖಲೆ ಬರೆದಿದ್ದರು.
ಇದೀಗ ಜಸ್ ಪ್ರೀತ್ ಬುಮ್ರಾ ಅವರು ವಿಂಡೀಸ್ ನ ಡರೆನ್ ಬ್ರಾವೊ, ಶಾಮ್ರಾ ಬ್ರೂಕ್ಸ್ ಮತ್ತು ರೋಸ್ಟನ್ ಚೇಸ್ ಅವರನ್ನು ಪೆವಿಲಿಯನ್ ಗೆ ಅಟ್ಟಿ ಹ್ಯಾಟ್ರಿಕ್ ವಿಕೆಟ್ ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ 44ನೇ ಬೌಲರ್ ಎನಿಸಿಕೊಂಡಿರುವ ಬುಮ್ರಾ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 47.1 ಓವರ್ ಗಳಲ್ಲಿ 117 ರನ್ ಗಳಿಗೆ ಆಲೌಟಾಗಿದೆ. ಬುಮ್ರಾ 27ಕ್ಕೆ 6 ವಿಕೆಟ್ ಪಡೆದರು.
ಬುಮ್ರಾ ಮೊದಲ ಟೆಸ್ಟ್ ನಲ್ಲಿ 6 ವಿಕೆಟ್ (7ಕ್ಕೆ 5 ಮತ್ತು 55ಕ್ಕೆ 1 ) ಪಡೆದಿದ್ದರು.







