ಉಡುಪಿ: ಗಣೇಶ ಚತುರ್ಥಿಗೆ ಬೆಲ್ಲದ ಗಣಪತಿ ಪ್ರದರ್ಶನ
ವೀಕ್ಷಕರ ಗಮನ ಸೆಳೆದ ಆಕರ್ಷಕ ಮೂರ್ತಿ

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ಮ ತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ ಗಣೇಶೋತ್ಸವದ ಪ್ರಯುಕ್ತ ಮಂಡ್ಯ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ "ಬೆಲ್ಲದ ಗಣಪತಿ"ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುಥಿ ವಿಥಿಕಾ ಇಲ್ಲಿಯ ಪ್ರದರ್ಶನ ಮಂಟಪದಲ್ಲಿ ಅನಾವರಣ ಮಾಡಲಾಯಿತು.
ನೋಡುಗರು ಸೆಲ್ಫಿ, ಫೋಟೊ ಕ್ಲಿಕ್ಕಿಸುವ ದೃಶ್ಯವಾಳಿಗಳು ಕಂಡು ಬಂದವು.
ಬಡಗುಬೆಟ್ಟು ಕೋ-ಒಪರೇಟಿವ್ ಸೊಸೈಟಿಯ ಮುಖ್ಯ ಆಡಳಿತ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ ಮತ್ತು ಉದ್ಯಮಿ ಭಾಸ್ಕರ್ ಶೇರಿಗಾರ್ ಅವರು ಜಂಟಿಯಾಗಿ ಉದ್ಘಾಟಿಸಿ, ಸಾರ್ವಜನಿಕರ ವಿಕ್ಷಣೆಗೆ ಅವಕಾಶ ನೀಡಿದರು.
ನಂತರ ಮಾತನಾಡಿದ ಜಯಕರ್ ಶೆಟ್ಟಿ ಇಂದ್ರಾಳಿ ಬೆಲ್ಲದ ಗಣಪತಿ ತಯಾರಿ ನಾಜೂಕಿನ ಕೆಲಸ, ಕಲಾವಿದರು ಬಹಳ ಸುಂದರವಾಗಿ ಬೆಲ್ಲಕ್ಕೆ ಗಣಪತಿ ರೂಪವನ್ನು ನೀಡಿದ್ದಾರೆ. ಬಲು ಅಪರೂಪವಾದ ಬೆಲ್ಲದ ಗಣಪತಿಯು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ಆಯೋಜಕರು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಆಲೆ ಮನೆಯಲ್ಲಿ 240 ಕೆಜಿಯ ಬೆಲ್ಲದ ಗಟ್ಟಿಯನ್ನು ಗಣಪತಿ ತಯಾರಿಕೆಗೆಂದು ಮುಂಗಡ ಹೇಳಿಕೆ ಕೊಟ್ಟು ತಯಾರಿಸಿ, ವರ್ತಕರಾದ ಕಟಪಾಡಿಯ ಗೋಪಾಲ ಭಟ್ ಮತ್ತು ಕುಟುಂಬಸ್ಥರು ಸಮಿತಿಗೆ ಒದಗಿಸಿದರು.
ಲೋಕೆಶ್ ಚಿತ್ಪಾಡಿ, ರವಿ ಹೀರೆಬೆಟ್ಟು, ವಾಸುದೇವ ಚಿತ್ಪಾಡಿ ಕಲಾವಿದರ ತಂಡವು, ಸತತ 5 ಗಂಟೆಗಳ ಸಮಯ ನಾಜೂಕಾಗಿ ಬೆಲ್ಲ ಕೆತ್ತನೆಗೊಳಿಸಿ ಸುಂದರ ಗಣಪತಿ ಮೂರ್ತಿ ತಯಾರಿಸಿದರು. ಮೂರ್ತಿ ಎತ್ತರವು 26 ಇಂಚು ಇದ್ದು, ಈ ವಿಗ್ರಹಕ್ಕೆ ಯಾವೊಂದು ಪೂಜಾ ವಿಧಿ ವಿಧಾನಗಳು ಇರುವುದಿಲ್ಲ. ಗಣೇಶೋತ್ಸವದ ಪ್ರಯುಕ್ತ ಕೇವಲ ಪ್ರದರ್ಶನ, ಮತ್ತು ಆಕರ್ಷಣೆಗೆ ಮಾತ್ರ ಸೀಮಿತಗೊಳಿಸಿದ್ದೇವೆ ಎಂದು ಪಂಚರತ್ನ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕ ಮಾತುಗಳಲ್ಲಿ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಸದಸ್ಯರಾದ ಚಿತ್ಪಾಡಿ ವಾಸುದೇವ್, ಸುರೇಶ್ ಕುಕ್ಕಿಕಟ್ಟೆ, ಮಹಮ್ಮದ್, ಡೇವಿಡ್, ಕ್ಲಾಸಿಕ್ ಸುಧಾಕರ್ ಶೆಟ್ಟಿ, ವಿಜೇಂದ್ರ ಭಟ್, ರಿತೇಶ್ ಭಟ್, ಜಯೇಶ್ ಭಟ್ ಕಟಪಾಡಿ ಹಾಗೂ ಪಂಚರತ್ನ ಸೇವಾ ಟ್ರಸ್ಟಿನ ಉಪಧ್ಯಾಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ಕೋಶಾಧಿಕಾರಿ ಪಲ್ಲವಿ ಸಂತೋಷ್, ರಾಘವೇಂದ್ರ ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.











