ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ತನಿಖೆಗೆ 'ಸಿಟ್ ' ರಚಿಸಲು ಸುಪ್ರೀಂ ಆದೇಶ

ಹೊಸದಿಲ್ಲಿ, ಸೆ.2: ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ವಿರುದ್ಧ ಕಾನೂನು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಇದೇ ವೇಳೆ ಆಕೆಯನ್ನು ಬೇರೆ ಕಾಲೇಜಿಗೆ ವರ್ಗಾಯಿಸುವಂತೆ ಉತ್ತರ ಪ್ರದೇಶದ ಆದಿತ್ಯಾನಂದ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ, ಅಲ್ಲಿ ಅವರು ತಮ್ಮ ಎಲ್ಎಲ್ಎಂ ಕೋರ್ಸ್ ನ್ನು ಮುಂದುವರಿಸಲಿದ್ದಾರೆ.
ವಿದ್ಯಾರ್ಥಿನಿ ಪ್ರಸ್ತುತ ಉತ್ತರ ಪ್ರದೇಶದ ಶಹಜಾನ್ಪುರದ ಚಿನ್ಮಯಾನಂದ್ ಆಶ್ರಮಕ್ಕೆ ಸೇರಿರುವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂತ ಸಮುದಾಯದ ಹಿರಿಯ ನಾಯಕರೊಬ್ಬರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಳು. ಆ ಬಳಿಕ ಆರು ದಿನಗಳ ಕಾಲ ಆಕೆ ಕಾಣೆಯಾಗಿದ್ದಳು.
ಆಕೆ ಚಿನ್ಮಯಾನಂದ್ ಹೆಸರನ್ನು ಹೇಳಲಿಲ್ಲ, ಆದರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಮಾಜಿ ಕೇಂದ್ರ ಸಚಿವರು ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆಯ ತಂದೆ ಆರೋಪಿಸಿದರು ಮತ್ತು ಆಕೆಯ ಕಣ್ಮರೆಗೆ ಹಿಂದಿನ ಕಾರಣ ಅವರೇ ಎಂದು ಆರೋಪಿಸಿದರು.
ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಶಹಜಹಾನಪುರ ಎಸ್ಎಸ್ಪಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಅವರಿಗೆ ದಿಲ್ಲಿಯಿಂದ ಮಂಗಳವಾರ ಉತ್ತರ ಪ್ರದೇಶಕ್ಕೆ ತೆರಳುವ ವೇಳೆ ಸೂಕ್ತ ಭದ್ರತೆ ಒದಗಿಸಬೇಕು. ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನ್ಯಾಯಪೀಠ ರಚಿಸುವಂತೆ ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ವಕೀಲರ ಗುಂಪೊಂದು ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್ ಸೂಕ್ತ ಕ್ರಮ ಕೈಗೊಂಡಿದೆ. ವಿದ್ಯಾರ್ಥಿನಿಯನ್ನು ಶುಕ್ರವಾರ ರಾಜಸ್ಥಾನದಲ್ಲಿ ಪೊಲೀಸರು ಪತ್ತೆ ಹಚ್ಚಿದ ಪೊಲೀಸರು ಸುಪ್ರೀಂ ಕೋರ್ಟ್ ಗೆ ಕೆಲವೇ ಗಂಟೆಗಳಲ್ಲಿ ಹಾಜರುಪಡಿಸಿದರು.







