ಅವ್ಯವಸ್ಥೆಯ ಆಗರವಾದ ಕೊಟ್ಟಿಂಜ-ಪೂಪಾಡಿ ಕಲ್ಲು ರಸ್ತೆ
ಹೊಂಡಗಳು ತುಂಬಿದ ಈ ರಸ್ತೆಯಲ್ಲಿ ಸಂಚರಿಸುವುದೇ ಸವಾಲು

ಫರಂಗಿಪೇಟೆ, ಸೆ.2: ರಾಷ್ಟ್ರೀಯ ಹೆದ್ದಾರಿ 73ರ ಫರಂಗಿ ಪೇಟೆಯಿಂದ ಅಮೆಮಾರ್ ಮಾರ್ಗವಾಗಿ ಸಂಚರಿಸುವ ಕೊಡ್ಮಾನ್ ಗ್ರಾಪಂ ವ್ಯಾಪ್ತಿಗೊಳಪ್ಪಟ್ಟ ಕೊಟ್ಟಿಂಜ- ಪೂಪಾಡಿಕಲ್ಲು-ಮಳ್ಳೂರು ಕ್ರಾಸ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ದುರಸ್ತಿಯಾಗದೆ ಹಲವು ವರ್ಷಗಳೇ ಸಂದಿವೆ. ಪೊಳಲಿ ದೇವಸ್ಥಾನ, ಕಲಾಯಿ, ಬೆಂಜನಪದವು ಮಳ್ಳೂರು ಮುಂತಾದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆ ಇದಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಈ ಬಾರಿ ಸುರಿದ ಭಾರೀ ಮಳೆಗೆ ಗುಡ್ಡೆಯ ಮಣ್ಣು ಕುಸಿದು ರಸ್ತೆಯ ಸ್ಥಿತಿ ಇನ್ನಷ್ಟು ಶೋಚನಿಯವಾಗಿದೆ. ಈ ರಸ್ತೆ ಅಭಿವೃದ್ಧಿಪಡಿಸಲು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಬ್ಬೆಟ್ಟು ಎಂಬಲ್ಲಿನ ಅಡ್ಡ ರಸ್ತೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಕೊಟ್ಟಿಂಜದಿಂದ ಮುಖ್ಯ ರಸ್ತೆ ಅಭಿವೃದ್ಧ್ಧಿಗಾಗಿ ಜಿಪಂ ಮತ್ತು ತಾಪಂ ಜನಪ್ರತಿನಿಧಿಗಳೊಂದಿಗೆ ಸೂಚಿಸಲಾಗುವುದು.
ಯು.ಟಿ.ಖಾದರ್, ಶಾಸಕ
ಈಗಾಗಲೇ ಕೊಟ್ಟಿಂಜದ ಪ್ರಾರಂಭದಲ್ಲಿ ಹತ್ತು ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲು ಅವರ ಅನುದಾನದಿಂದ ಐದು ಲಕ್ಷ ರೂ. ಈಗಾಗಲೇ ಈ ರಸ್ತೆಗೆ ಮಂಜೂರಾಗಿದೆ. ದೊಡ್ಡ ಮೊತ್ತದ ಅನುದಾನ ಅಗತ್ಯವಿರುವುದರಿಂದ ಶಾಸಕ ಯು.ಟಿ. ಖಾದರ್ ಗಮನಹರಿಸಬೇಕು.
ರವೀಂದ್ರ ಕಂಬಳಿ, ಜಿಪಂ ಸದಸ್ಯ
ಕಲಾಯಿ ಮಳ್ಳೂರು ಮತ್ತು ಆಸುಪಾಸಿನ ಜನರು ವಿವಿಧ ಅಗತ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಫರಂಗಿಪೇಟೆಗೆ ಬರಬೇಕಾದರೆ ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಈ ರಸ್ತೆ ಸಂಪೂರ್ಣ ಹದಗೆೆಟ್ಟ ಕಾರಣದಿಂದ ಸಂಚಾರಕ್ಕೆ ತೊಡಕಾಗುತ್ತಿದೆ.
ಕೆ.ಉಸ್ಮಾನ್, ಕಲಾಯಿ







