ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪತ್ನಿಗೆ 'ಝಡ್ ಪ್ಲಸ್' ವಿಐಪಿ ಸಿಆರ್‌ಪಿಎಫ್ ಭದ್ರತೆ

ಹೊಸದಿಲ್ಲಿ, ಸೆ.2: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರ್ಷರನ್ ಕೌರ್ ಅವರಿಗೆ ‘ಝಡ್ ಪ್ಲಸ್' ವಿಐಪಿ ಸಿಆರ್‌ಪಿಎಫ್ ಭದ್ರತೆಯನ್ನು ಕೇಂದ್ರ ಸರಕಾರ ಒದಗಿಸಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅವರಿಗೆ ಹಿಂದೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಇತ್ತೀಚೆಗೆ ಕೇಂದ್ರ ಸರಕಾರ ಹಿಂಪಡೆದಿದೆ. ಆದರೆ ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗಿದೆ. ಡಾ. ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಅವರು ನಂ.3 ಮೋತಿಲಾಲ್ ನೆಹರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿರುವಾಗ ಮತ್ತು ದೇಶಾದ್ಯಂತ ಅವರು ಪ್ರವಾಸದಲ್ಲಿರುವಾಗ 45 ಸಶಸ್ತ್ರ ಕಮಾಂಡೋಗಳು ಅವರ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಅವರಿಗೆ ಮುಂಗಡ ಭದ್ರತಾ ಸಂಪರ್ಕ (ಎಎಸ್‌ಎಲ್) ಪ್ರೋಟೋಕಾಲ್ ಅನ್ನು ಸಹ ಪಡೆಯಲಿದ್ದು, ಅಲ್ಲಿ ಇಬ್ಬರು ವಿವಿಐಪಿಗಳು ಭೇಟಿ ನೀಡಬೇಕಾದ ಸ್ಥಳವನ್ನು ಭದ್ರತಾ ಸಿಬ್ಬಂದಿ ಮುಂಗಡ ಪರಿಶೀಲನೆ ನಡೆಸಲಿದ್ದಾರೆ.
ಎಸ್‌ಪಿಜಿ, ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶೀಘ್ರದಲ್ಲೇ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ.
ಡಾ. ಸಿಂಗ್ ಅವರಿಗೆ ನೀಡಲಾದ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ರಕ್ಷಣೆಯನ್ನು ಇತ್ತೀಚೆಗೆ ಹಿಂಪಡೆಯಲಾಗಿತ್ತು
ಈಗ ಉನ್ನತ ದರ್ಜೆಯ ಭದ್ರತೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಂಧಿ ಕುಟುಂಬಕ್ಕೆ ಮಾತ್ರ ನೀಡಲಾಗುವುದು - ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರಿಗೆ ಭದ್ರತೆ ಮುಂದುವರಿಯಲಿದೆ
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ 1985 ರಲ್ಲಿ ಎಸ್‌ಪಿಜಿ ಸ್ಥಾಪಿಸಲಾಗಿತ್ತು . ಪ್ರಧಾನ ಮಂತ್ರಿಯನ್ನು ರಕ್ಷಿಸಲು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡುವ ಬಗ್ಗೆ ನಿಯಮ ರೂಪಿಸಲಾಗಿದೆ.







