‘ಜೀವಮಾನದ ಗೌರವ’: ಬಯೋಡೇಟಾ ಕೇಳಿದ ಜೆಎನ್ ಯು ನಡೆಗೆ ರೋಮಿಲಾ ಥಾಪರ್ ಪ್ರತಿಕ್ರಿಯೆ

ಹೊಸದಿಲ್ಲಿ, ಸೆ.2: ಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್‌ರನ್ನು ಗೌರವ ಪ್ರೊಫೆಸರ್ ಆಗಿ ಮುಂದುವರಿಸಬೇಕೇ ಎಂದು ನಿರ್ಧರಿಸಲು ಅವರಿಂದ ಸಿವಿ(ವೈಯಕ್ತಿಕ, ಶೈಕ್ಷಣಿಕ ವಿವರ)ಸಲ್ಲಿಸುವಂತೆ ಸೂಚಿಸಿರುವ ಜೆಎನ್ ಯು ಕ್ರಮವನ್ನು ಜೆಎನ್ ಯು ಅಧ್ಯಾಪಕರ ಅಸೋಸಿಯೇಶನ್ ‘ರಾಜಕೀಯ ಪ್ರೇರಿತ’ ಎಂದು ಬಣ್ಣಿಸಿದೆ.
ಅಸೋಸಿಯೇಶನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಎನ್ ಯು, “ನಾವು ನಿಯಮಗಳನ್ನಷ್ಟೇ ಪಾಲಿಸಿದ್ದೇವೆ. 75 ವರ್ಷ ಕಳೆದರವಿಗೆ ಅವರ ಲಭ್ಯತೆ ಮತ್ತು ವಿವಿ ಜೊತೆಗೆ ಮುಂದುವರಿಯಲು ಅವರ ಇಚ್ಛೆಯ ಬಗ್ಗೆ ವಿವಿಯು ತಿಳಿದುಕೊಳ್ಳುವುದು ನಿಯಮಗಳ ಪ್ರಕಾರ ಅಗತ್ಯವಾಗಿದೆ” ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಮಿಲಾ ಥಾಪರ್ “ಇದು ಜೀವಮಾನದ ಗೌರವ” ಎಂದಿದ್ದಾರೆ.
ಆರಂಭಿಕ ಭಾರತೀಯ ಇತಿಹಾಸದಲ್ಲಿ ವಿಶೇಷ ಪರಿಣತಿ ಪಡೆದಿರುವ ರೋಮಿಲಾ ಥಾಪರ್ ಸುಮಾರು 6 ದಶಕಗಳ ಕಾಲ ಪ್ರಾಧ್ಯಾಪಕಿ ಹಾಗೂ ಸಂಶೋಧಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1970ರಿಂದ 1991ರ ತನಕ ಜೆಎನ್‌ಯುನಲ್ಲಿ ಪ್ರೊಫೆಸರ್ ಆಗಿದ್ದರು. 1993ರಲ್ಲಿ ಗೌರವ ಪ್ರಾಧ್ಯಾಪಕಿ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಅಮೆರಿಕ ಲೈಬ್ರರಿ ಆಫ್ ಕಾಂಗ್ರೆಸ್‌ನಿಂದ ಪ್ರತಿಷ್ಠಿತ ಕ್ಲುಗೆ ಪ್ರಶಸ್ತಿಗೆ ಭಾಜನರಾಗಿದ್ದರು.
ರೋಮಿಲಾ ಥಾಪರ್ ರ ಬಯೋಡಾಟಾ ಕೇಳಿದ ಜೆಎನ್ ಯು ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ರೋಮಿಲಾ ಥಾಪರ್ ಬರೆದ ‘ದಿ ಪಬ್ಲಿಕ್ ಇಂಟಲೆಕ್ಚುವೆಲ್ ಇನ್ ಇಂಡಿಯಾ’ ಪುಸ್ತಕ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿಮರ್ಶಾತ್ಮಕವಾಗಿ ಅವಲೋಕಿಸಲಾಗಿದೆ.







