ಬೈಂದೂರು: ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ

ಬೈಂದೂರು, ಸೆ.3: ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಅಂಬೇಡ್ಕರ್ ಕಾರ್ಮಿಕ ಹಸ್ತ ಯೋಜನೆಯಡಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ರೋಟರಿ ಕ್ಲಬ್ ಬೈಂದೂರು ಹಾಗೂ ಸಿಐಟಿಯು ಬೈಂದೂರು ತಾಲೂಕು ಸಹಯೋಗದಲ್ಲಿ ಬೈಂದೂರು ಆಟೋರಿಕ್ಷಾ ಮತ್ತು ವಾಹನ ಚಾಲಕರಿಗೆ ಅಪಘಾತ ಜೀವ ರಕ್ಷಕ ಯೋಜನೆಯಡಿ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾ ಗಾರವನ್ನು ಬೈಂದೂರು ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ ಮಾತನಾಡಿ, ಆಟೋರಿಕ್ಷಾ ಮತ್ತು ಖಾಸಗಿ ವಾಣಿಜ್ಯ ವಾಹನ ಚಾಲಕರು ಮಂಡಳಿಯ ವಿವಿಧ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಪ್ರಯತ್ನ ಮಾಡ ಬೇಕು. ಅಪಘಾತ ಸಂದರ್ಭ ಚಾಲಕರು ತುರ್ತು ನೆರವಿಗೆ ದಾವಿಸಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಜೀವಹಾನಿಯಾಗುವುದನ್ನು ತಪ್ಪಿಸುವ ಮಹತ್ತರ ಕೆಲಸ ವಾಡುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ ಮಾತನಾಡಿ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯು ಚಾಲನಾ ಪರವಾನಿಗೆ ಪಡೆದ 20 ರಿಂದ 70 ವರ್ಷಗಳ ವಯೋಮಿತಿಯ ಖಾಸಗಿ ಅಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ. ಯೋಜನೆಯಡಿ ಪಲಾನುಭವಿಯು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಯೋಜನೆ ಸಂಪೂರ್ಣ ಉಚಿತವಾಗಿದ್ದು, ಸರಕಾರವೇ ಪೂರ್ಣವಾಗಿ ಪ್ರೀಮಿ ಯಂ ಮೊತ್ತವನ್ನು ಪಾವತಿಸಲಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಥಮ ಚಿಕಿತ್ಸೆ ಜಿಲ್ಲಾ ತರಬೇತುದಾರರಾದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಮತ್ತು ಡಾ.ಕೀರ್ತಿ ಪಾಲನ್ ಕಾರ್ಯಾಗಾರ ನಡೆಸಿಕೊಟ್ಟರು. ಉಡುಪಿ ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಭಟ್ ಉಪ್ಪುಂದ, ಕಾರ್ಯದರ್ಶಿ ಮಂಜುನಾಥ ಮಹಾಲೆ, ಕಾರ್ಮಿಕ ಸಂಘಗಳ ಒಕ್ಕೂಟ ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ, ರಾಜೀವ ಪಡುಕೋಣೆ, ಗಣೇಶ ತೊಂಡೆಮಕ್ಕಿ ಮಾತಾಡಿದರು.
ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕ ಡಿ.ಎಸ್.ಸತ್ಯನಾರಾಯಣ, ಉಡುಪಿ ವೃತ್ತ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಪ್ರವೀಣ ಕುಮಾರ್, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ಮಂಜುನಾಥ ಪಡುವರಿ, ಸಂತೋಷ ನಾಯ್ಕನಕಟ್ಟೆ, ಅಮ್ಮಯ್ಯ ಪೂಜಾರಿ ಬಿಜೂರು, ನಾಗರತ್ನ ನಾಡ, ಜಟ್ಟ ಪೂಜಾರಿ ಯಡ್ತರೆ, ವಿಜಯ ಕೋಯಾನಗರ, ಸರಸ್ವತಿ, ಕಾರ್ಮಿಕ ಇಲಾಖೆಯ ಶಿವಪ್ರಸಾದ್, ಸ್ಟೇನಿ ಸಹನಾ ಉಪಸ್ಥಿತರಿದ್ದರು. ಕೋಣಿ ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.







