ಭಾರತದಿಂದ ಜೀವರಕ್ಷಕ ಔಷಧಿಗಳ ಆಮದಿಗೆ ಪಾಕ್ ಸರಕಾರದ ಒಪ್ಪಿಗೆ

ಇಸ್ಲಾಮಾಬಾದ್,ಸೆ.3: ಕಾಶ್ಮೀರ ವಿಷಯ ಕುರಿತಂತೆ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರೂ ಭಾರತದಿಂದ ಜೀವರಕ್ಷಕ ಔಷಧಿಗಳ ಆಮದಿಗೆ ಪಾಕಿಸ್ತಾನ ಸರಕಾರವು ಅವಕಾಶವನ್ನು ನೀಡಿದೆ ಎಂದು ಪಾಕ್ ಸುದ್ದಿವಾಹಿನಿಯು ವರದಿ ಮಾಡಿದೆ.
ಭಾರತವು ಕಳೆದ ತಿಂಗಳು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಬಳಿಕ ಪಾಕಿಸ್ತಾನವು ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿತ್ತು ಮತ್ತು ವ್ಯಾಪಾರವನ್ನು ವಿಧ್ಯುಕ್ತವಾಗಿ ಅಮಾನತುಗೊಳಿಸಿತ್ತು.
ಪಾಕಿಸ್ಥಾನದ ವಾಣಿಜ್ಯ ಸಚಿವಾಲಯವು ಶಾಸನಬದ್ಧ ನಿಯಂತ್ರಕ ಆದೇಶದ ಮೂಲಕ ಭಾರತದಿಂದ ಔಷಧಿಗಳ ಆಮದು ಮತ್ತು ರಫ್ತಿಗೆ ಅನುಮತಿ ನೀಡಿದೆ ಎಂದು ಸುದ್ದಿವಾಹಿನಿಯು ತಿಳಿಸಿದೆ.
ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಪಾಕಿಸ್ತಾನದಿಂದ ಆಮದಾದ ಸರಕುಗಳ ಮೇಲೆ ಶೇ.200ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಿದಾಗಲೇ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳು ಹದಗೆಟ್ಟಿದ್ದವು.
ಕಳೆದ 16 ತಿಂಗಳುಗಳಲ್ಲಿ ಪಾಕಿಸ್ತಾನವು ಭಾರತದಿಂದ 36 ಮಿ.ಡಾ.ಗೂ ಅಧಿಕ ಮೌಲ್ಯದ ರೇಬಿಸ್ ನಿರೋಧಕ ಮತ್ತು ವಿಷ ಪ್ರತಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡಿದೆ.







