ಜೈಲಿಗೆ ಹೋಗಿ ಬಂದ ಹಾಲಿ ಮುಖ್ಯಮಂತ್ರಿ ತಿಂದಿದ್ದು ಏನು?: ವಿ.ಎಸ್.ಉಗ್ರಪ್ಪ ಪ್ರಶ್ನೆ

ಬೆಂಗಳೂರು, ಸೆ.3: ಡಿ.ಕೆ.ಶಿವಕುಮಾರ್ ಅವರು ಭಾವುಕರಾಗಿ ಕಣ್ಣೀರಿಟ್ಟಿರುವ ಬಗ್ಗೆ ಟೀಕೆಗಳನ್ನು ಮಾಡುತ್ತಿರುವ ಬಿಜೆಪಿ ನಾಯಕರು, ಒಮ್ಮೆ ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋದ ಸಂದರ್ಭದಲ್ಲಿ ತಿಂದಿದ್ದು ಏನೆಂದು ನೆನಪಿಸಲಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಖಾರವಾಗಿಯೇ ಪ್ರಶ್ನಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಮಾತುಗಳನ್ನು ಉಲ್ಲೇಖಿಸಿ ಇಬ್ಬರು ಉಪಮುಖ್ಯಮಂತ್ರಿಗಳು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ನಿನ್ನೆ ಟೀಕಿಸಿದ್ದಾರೆ. ಆದರೆ, ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಉಪ್ಪು ತಿಂದಿದ್ದರೋ ಅಥವಾ ಸಕ್ಕರೆ ತಿಂದಿದ್ದರೋ ಎಂದು ವಾಗ್ದಾಳಿ ನಡೆಸಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾವ ಕಾರಣಕ್ಕೆ ? ಸಿ.ಸಿ.ಪಾಟೀಲ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದು, ಇವರೆಲ್ಲಾ ಸಕ್ಕರೆ ತಿಂದಿದ್ದರಾ ಎಂದು ಹೇಳಿದರು.
ನಮ್ಮ ಮನೆಯಲ್ಲಿ 5 ಕೋಟಿ ರೂ. ಹಣ ಇಟ್ಟುಹೋಗಿದ್ದರು ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಸದನದಲ್ಲಿಯೇ ಆರೋಪಿಸಿದ್ದಾರೆ. ಈ ಬಗ್ಗೆ ಐಟಿ ಇಲಾಖೆ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಲ್ಲವೇಕೆ. ಹೀಗೆ, ಹತ್ತಾರು ಪ್ರಕರಣಗಳು ಇದ್ದರೂ, ಈಡಿ ಮತ್ತು ಐಟಿ ಇಲಾಖೆ ಸುಮ್ಮನೆ ಇರುವ ಹಿಂದೆ ಯಾರ ಕೈವಾಡ ಇದೆ ಎಂದು ಪ್ರಶ್ನೆ ಮಾಡಿದರು.
ಗುಜರಾತಿನ ಶಾಸಕರಿಗೆ ರಕ್ಷಣೆ ಕೊಟ್ಟ ಕಾರಣಕ್ಕೆ ಅವರ ಮೇಲೆ ಐಟಿ, ಈಡಿ ರಾಜಕೀಯ ಪ್ರೇರಿತ ದಾಳಿ ನಡೆಸಿದ್ದಾರೆ. ವಿಚಾರಣೆ ನೆಪದಲ್ಲಿ ರಾಜಕೀಯ ಪ್ರೇರಿತ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಎಂದೂ ಸಹ ಸರಕಾರಿ ತನಿಖೆ ಸಂಸ್ಥೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಂಡಿಲ್ಲ ಎಂದು ಉಗ್ರಪ್ಪ ಹೇಳಿದರು.







