ಎಲ್‌ಐಸಿ: ಉಡುಪಿ ವಿಭಾಗದಿಂದ 103 ವಿಮಾ ಗ್ರಾಮಗಳ ಘೋಷಣೆ

ಉಡುಪಿ, ಸೆ. 3: ಕಳೆದ ಆರ್ಥಿಕ ವರ್ಷದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಉಡುಪಿ ವಿಭಾಗದಲ್ಲಿ ಸುಮಾರು 103 ವಿಮಾ ಗ್ರಾಮಗಳನ್ನು ಘೋಷಿಸಲಾಗಿದ್ದು, ಈ ಗ್ರಾಮಗಳ ಅಭಿವೃದ್ಧಿಗೆ 25,000ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗಿದೆ. ಅಲ್ಲದೇ 12 ಶಾಲೆಗಳನ್ನು ವಿಮಾ ಶಾಲೆಗಳೆಂದು ಘೋಷಿಸಲಾಗಿದೆ ಎಂದು ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಅನಂತಪದ್ಮನಾಭ ಕೆ. ತಿಳಿಸಿದ್ದಾರೆ.
ದೇಶದ ಅಗ್ರಗಣ್ಯ ವಿಮಾ ಕಂಪೆನಿಯಾದ ಎಲ್ಲೈಸಿಯ 63ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸೆ.1ರಿಂದ 7ರವರೆಗೆ ಆಚರಿಸಲಾಗುವ ವಿಮಾ ಸಪ್ತಾಹದ ಸಂದರ್ಭದಲ್ಲಿ ಸಂಸ್ಥೆಯ ಸಾಧನೆಗಳನ್ನು ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
2018-19ನೇ ಸಾಲಿನಲ್ಲಿ ವಿಭಾಗವು 1.63 ಲಕ್ಷ ಹೊಸಪಾಲಿಸಿಯ ಗುರಿಯಲ್ಲಿ 1,33,764 ಹೊಸ ಪಾಲಿಸಿಗಳನ್ನು ಮಾಡುವ ಮೂಲಕ 350 ಕೋಟಿ ರೂ.ಗಳ ಪ್ರಥಮ ಪ್ರೀಮಿಯಂನಲ್ಲಿ 282.91 ಕೋಟಿ ರೂ.ಗಳನ್ನು ಸಂಗ್ರಹಿಸಿ ಶೇ.80.83 ಸಾಧನೆ ಮಾಡಿದೆ. ಈ ವರ್ಷದಲ್ಲಿ 1.64 ಲಕ್ಷ ಹೊಸ ಪಾಲಿಸಿಗಳ ಗುರಿಯನ್ನು ಹೊಂದಿದ್ದು, ಒಟ್ಟಾರೆಯಾಗಿ 379 ಕೋಟಿ ರೂ.ಗಳನ್ನು ಪ್ರಥಮ ಪ್ರೀಮಿಯಂ ಗಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಉಡುಪಿ ವಿಭಾಗ ಕಳೆದ ಸಾಲಿನಲ್ಲಿ ಮಾ.31ರವರೆಗೆ 1,85,458 ಲಕ್ಷ ಪಾಲಿಸಿಗಳಿಗೆ ಒಟ್ಟು 941.62 ಕೋಟಿರೂ.ಗಳನ್ನು ಪಾವತಿಸಿದೆ. ಅಲ್ಲದೇ 7.40 ಲಕ್ಷ ಪಾಲಿಸಿಗಳನ್ನು ಈಗಾಗಲೇ ಎನ್‌ಇಎಫ್‌ಟಿ ಜಾಲಕ್ಕೆ ನೊಂದಣಿ ಮಾಡಲಾಗಿದೆ ಎಂದು ಅನಂತಪದ್ಮನಾಭ್ ತಿಳಿಸಿದರು.
1956ರಲ್ಲಿ ಪ್ರಾರಂಭವಾದ ಜೀವವಿಮಾ ನಿಗಮ ಇಂದು ದೇಶದ ಆರ್ಥಿಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ದೇಶದ ವಿಮಾ ಮಾರುಕಟ್ಟೆಯಲ್ಲಿ ಈಗಲೂ ಶೇ.74.71ರಷ್ಟು ಸಾಮ್ಯತೆಯನ್ನು ಹೊಂದಿರುವ ಎಲ್‌ಐಸಿ, ಪ್ರಥಮ ಪ್ರೀಮಿಯಂನಲ್ಲಿ ಶೇ.66ರಷ್ಟನ್ನು ಹೊಂದಿದೆ. ಕಳೆದ ವರ್ಷ ದೇಶದಲ್ಲಿ ಎರಡು ಕೋಟಿ ಹೊಸ ಪಾಲಿಸಿಯನ್ನು ಗಳಿಸಿದೆ ಎಂದವರು ನುಡಿದರು.
ದೇಶದಲ್ಲಿ ಒಟ್ಟು 40.70 ಕೋಟಿ ಮಂದಿ ಎಲ್‌ಐಸಿ ಪ್ರೀಮಿಯಂನ್ನು ಹೊಂದಿದ್ದಾರೆ. ಇದರಲ್ಲಿ 2909 ಕೋಟಿ ವೈಯಕ್ತಿಕ ಪಾಲಿಸಿಯಾದರೆ, 11.61 ಕೋಟಿ ಗುಂಪು ವಿಮಾ ಪಾಲಿಸಿಯಾಗಿದೆ. ಇವುಗಳ ಒಟ್ಟು ವಿಮಾ ಮೊತ್ತ 66.40 ಲಕ್ಷ ಕೋಟಿ ರೂ.ಗಳಾಗಿವೆ ಎಂದರು.
ಕೇವಲ 5 ಕೋಟಿ ರೂ.ಬಂಡವಾಳ ಹಾಗೂ 352 ಕೋಟಿ ರೂ. ಒಟ್ಟು ಆಸ್ತಿಯೊಂದಿಗೆ 1956ರಲ್ಲಿ ಪ್ರಾರಂಭಗೊಂಡ ಎಲ್‌ಐಸಿ ಇಂದು 31.11 ಲಕ್ಷ ಕೋಟಿ ರೂ. ಒಟ್ಟು ಆಸ್ತಿ ಹಾಗೂ 28.28 ಲಕ್ಷ ಕೋಟಿ ರೂ. ಲೈಫ್ ಫಂಡ್‌ನ್ನು ಹೊಂದಿದೆ. ಎಲ್‌ಐಸಿ ಸಂಸ್ಥೆ ಇಂದು ದೇಶದಲ್ಲಿ 8 ವಲಯ, 113 ವಿಭಾಗ, 2048 ಶಾಖೆ, 1481 ಉಪಗ್ರಹ ಶಾಖೆ, 1200 ಮಿನಿ ಕಚೇರಿ, 1.12ಲಕ್ಷ ಉದ್ಯೋಗಿಗಳು, 11.79 ಲಕ್ಷ ಏಜೆಂಟ್‌ಗಳನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ವಿಭಾಗದ ಸೇಲ್ಸ್ ಮ್ಯಾನೇಜರ್ ಎಸ್. ಎನ್.ಸದಾನಂದ ಕಾಮತ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ವೆಂಕಟರಮಣ ಶೀರೂರ್ ಉಪಸ್ಥಿತರಿದ್ದರು.








