ಸಿಖ್ ಯಾತ್ರಿಕರಿಗೆ ವಿಮಾನ ನಿಲ್ದಾಣಗಳಲ್ಲೇ ವೀಸಾ ವಿತರಣೆ: ಪಾಕ್ ಪ್ರಧಾನಿ ಇಮ್ರಾನ್

ಲಾಹೋರ್, ಸೆ. 3: ಭಾರತ ಮತ್ತು ಇತರ ದೇಶಗಳಿಂದ ಪಾಕಿಸ್ತಾನದಲ್ಲಿರುವ ಗುರುದ್ವಾರಗಳನ್ನು ಸಂದರ್ಶಿಸುವ ಸಿಖ್ ಯಾತ್ರಿಕರಿಗೆ ಒಂದಕ್ಕಿಂತ ಹೆಚ್ಚು ಮತ್ತು ‘ವಿಮಾನ ನಿಲ್ದಾಣಗಳಲ್ಲೇ’ (ವೀಸಾ ಆನ್ ಅರೈವಲ್) ವೀಸಾಗಳನ್ನು ನೀಡಲಾಗುವುದು ಹಾಗೂ ಪವಿತ್ರ ಸ್ಥಳಗಳಿಗೆ ಅವರು ನೀಡುವ ಭೇಟಿಯ ವೇಳೆ ಗರಿಷ್ಠ ಸಂಭಾವ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.
‘‘ನಿಮಗೆ ಬಹು ವೀಸಾಗಳನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಇದು ನಮ್ಮ ಜವಾಬ್ದಾರಿ. ನಿಮಗೆ ವಿಮಾನ ನಿಲ್ದಾಣದಲ್ಲೇ ವೀಸಾಗಳನ್ನು ನೀಡುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ’’ ಎಂದು ಇಮ್ರಾನ್ ಖಾನ್ ಸೋಮವಾರ ಹೇಳಿರುವುದಾಗಿ ‘ದ ನ್ಯೂಸ್ ಇಂಟರ್‌ನ್ಯಾಶನಲ್’ ವರದಿ ಮಾಡಿದೆ.
ಅವರು ಇಲ್ಲಿನ ಗವರ್ನರ್ ಹೌಸ್ ಸಮೀಪ ನಡೆದ ಅಂತರ್‌ರಾಷ್ಟ್ರೀಯ ಸಿಖ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪಾಕಿಸ್ತಾನದ ಪಂಜಾಬ್ ರಾಜ್ಯಪಾಲ ಚೌಧರಿ ಸರ್ವಾರ್, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವ ಸಂಪುಟ ಸದಸ್ಯರು ಹಾಗೂ ಬ್ರಿಟನ್, ಅಮೆರಿಕ, ಕೆನಡ, ಯುರೋಪ್ ಮತ್ತು ಇತರ ದೇಶಗಳ ಸಿಖ್ ಯಾತ್ರಿಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
‘‘ಧಾರ್ಮಿಕ ಸ್ಥಳಗಳ ಸಂದರ್ಶನಕ್ಕಾಗಿ ಅಥವಾ ಪ್ರವಾಸಕ್ಕಾಗಿ ಪಾಕಿಸ್ತಾನಕ್ಕೆ ಬರುವ ವಿದೇಶಿಯರು ವೀಸಾ ಪಡೆಯಲು ಪಡುವ ಕಷ್ಟಗಳ ಬಗ್ಗೆ ನನ್ನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನನಗೆ ಗೊತ್ತಾಯಿತು’’ ಎಂದರು.
‘‘ನಾವು ವೀಸಾ ವ್ಯವಸ್ಥೆಯನ್ನು ಬದಲಿಸಿದ್ದೇವೆ ಹಾಗೂ ಅಡೆತಡೆಗಳನ್ನು ಸೃಷ್ಟಿಸುವ ಜನರ ಪ್ರವೃತ್ತಿ ನಿಧಾನವಾಗಿ ತಿಳಿಯಾಗುತ್ತದೆ’’ ಎಂದು ಇಮ್ರಾನ್ ಖಾನ್ ನುಡಿದರು.







