ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಮಲ್ಪೆ ರಾಮದಾಸ ಸಾಮಗ ಯಕ್ಷಗಾನ ಪ್ರಶಸ್ತಿ

ಉಡುಪಿ, ಸೆ.3: ಉಡುಪಿ ತುಳುಕೂಟದ ವತಿಯಿಂದ ನೀಡಲಾಗುವ ಈ ಸಾಲಿನ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಗೆ ತೆಂಕುಕಿಟ್ಟಿನ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟಿನ ತುಳು ಯಕ್ಷಗಾನ ಪರಂಪರೆಯನ್ನು ಬೆಳೆಸಿರುವ ದಾಮೋದರ ಮಂಡೆಚ್ಚರ ಶಿಷ್ಯರಾಗಿರುವ ದಿನೇಶ್ ಅಮ್ಮಣ್ಣಾಯ, ಯಕ್ಷಗಾನ ಕಲಾಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಸೇವೆಗೈದ ಅನುಭವವನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ತುಳುಕೂಟ ದಿನೇ್ ಅಮ್ಮಣ್ಣಾಯರಿಗೆ ನೀಡಿ ಗೌರವಿಸಲಿದೆ.
ಪುತ್ತೂರು ಮೇಳದಲ್ಲಿ ಚಂಡೆ, ಮದ್ದಲೆ ವಾದಕರಾಗಿ ಸೇರಿದ ದಿನೇಶ್ ಅಮ್ಮಣ್ಣಾಯ ಅವರು ಅಲ್ಲಿಯೇ ಭಾಗವತರಾಗಿಯೂ ಮಿಂಚಿದವರು. ಮುಂದೆ ಕರ್ನಾಟಕ ಮೇಳ ಸೇರಿ ದಾಮೋದರ ಮಂಡೆಚ್ಚರ ನಿಧನಾ ನಂತರ ತುಳು ಪ್ರಸಂಗಗಳನ್ನು ಮೆರೆಸಿದರು. ಕಾಡಮಲ್ಲಿಗೆ, ಕಚ್ಚೂರಮಾಲ್ದಿ, ಪಟ್ಟದಪದ್ಮಲೆ ಯಂತಹ ಯಕ್ಷಗಾನ ಪ್ರಸಂಗಗಳು ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಜಯಭೇರಿ ಬಾರಿಸಿದವು.
ಪೌರಾಣಿಕ ಪ್ರಸಂಗಗಳ ಭಾಗವತಿಕೆಯಲ್ಲಿಯೂ ಅಮ್ಮಣ್ಣಾಯರದ್ದು ಬಹುದೊಡ್ಡ ಹೆಸರು. ಮಾನಿಷಾದ ಪ್ರಸಂಗವನ್ನು ಮನೆಮಾತಾಗಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ಅಕ್ಷಯಾಂಬರ ಪ್ರಸಂಗದ ಭಾಗವತಿಕೆ ಬರೇ ಅಮ್ಮಣ್ಣಾಯ ಅವರಿಗೇ ಮೀಸಲಾಗಿದೆ. ನಳದಮಯಂತಿ, ಸತ್ಯ ಹರಿಶ್ಚಂದ್ರ ಪ್ರಸಂಗಗಳ ಅಮ್ಮಣ್ಣಾಯರ ಭಾಗವತಿಕೆ ಸದಾ ಸ್ಮರಣೀಯ. ಮಲ್ಪೆ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ಕೋಳ್ಯೂರು ರಾಮಚಂದ್ರ ರಾವ್, ಗುಂಪೆ ರಾಮಯ್ಯ ರೈ, ಅರುವ ಕೊರಗಪ್ಪ ಶೆಟ್ಟಿ ಮುಂತಾದ ಕಲಾವಿದರ ಒಡನಾಟವು ಇವರ ಅನುಭವದ ವಿಸ್ತರಣೆಗೆ ಕಾರಣವಾಗಿದೆ.
ಪ್ರಸ್ತುತ ಎಡನೀರು ಮೇಳದಲ್ಲಿ ತಿರುಗಾಟ ನಡೆಸಿ, ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಉಡುಪಿ ತುಳುಕೂಟದ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ ವಿತರಣಾ ಸಮಾರಂಭ ಸೆ.15ರಂದು ಸಂಜೆ 3:30ಕ್ಕೆ ಉಡುಪಿ ಕಿದಿಯೂರು ಹೋಟೇಲು ಸಭಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ ದಿನೇಶ್ ಅಮ್ಮಣ್ಣಾಯ ಬಳಗದವರಿಂದ ಕಾಡಮಲ್ಲಿಗೆ, ಕೋಟಿ ಚೆನ್ನಯ್ಯ, ಗೆಜ್ಜೆಪೂಜೆ ಪ್ರಸಂಗವನ್ನೊಳಗೊಂಡ ಯಕ್ಷನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







