ಚಂದ್ರಯಾನ 2: ಚಂದ್ರನಿಗೆ ಮತ್ತಷ್ಟು ಹತ್ತಿರವಾದ ವಿಕ್ರಮ್

ಹೊಸದಿಲ್ಲಿ,ಸೆ.3: ಜುಲೈ 22ರಂದು ಉಡಾವಣೆಗೊಂಡ ಚಂದ್ರಯಾನ 2 ಮಂಗಳವಾರದಂದು ತನ್ನ ಮೊದಲ ಕಕ್ಷೆಯಿಂದ ಕೆಳಗಿಳಿಯುವ ಪ್ರಕ್ರಿಯೆಯನ್ನು ನಡೆಸುವ ಮೂಲಕ ಚಂದ್ರನಿಗೆ ಮತ್ತಷ್ಟು ಸಮೀಪವಾಯಿತು. ಭಾರತೀಯ ಕಾಲಮಾನ ಬೆಳಗ್ಗೆ 8.50ರ ಸುಮಾರಿಗೆ 4 ಸೆಕೆಂಡ್‌ಗಳ ಈ ಪ್ರಕ್ರಿಯೆಯನ್ನು ಇದೇ ಮೊದಲ ಚಂದ್ರಯಾನ 2ನಲ್ಲಿರುವ ಲ್ಯಾಂಡರ್ ವಿಕ್ರಮ್‌ನಲ್ಲಿರುವ ಇಂಧನ ವ್ಯವಸ್ಥೆಯನ್ನು ಬಳಸಿ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈವರೆಗೆ ಕಕ್ಷೆಗೆ ಸೇರುವಿಕೆ ಪ್ರಕ್ರಿಯೆಯನ್ನು ಆರ್ಬಿಟರ್‌ನಲ್ಲಿದ್ದ ಇಂಧನ ವ್ಯವಸ್ಥೆಯನ್ನು ಬಳಸಿ ಮಾಡಲಾಗುತ್ತಿತ್ತು. ಸೋಮವಾರದಂದು ವಿಕ್ರಮ್ ಲ್ಯಾಂಡರ್ ಚಂದ್ರಯಾನ 2 ಆರ್ಬಿಟರ್‌ನಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡಿತ್ತು. ಸದ್ಯ ಆರ್ಬಿಟರ್ ಮತ್ತು ಲ್ಯಾಂಡರ್ ಚಂದ್ರನ ಸುತ್ತ ಸುತ್ತುತ್ತಿದ್ದು ಎರಡೂ ಸುಸ್ಥಿತಿಯಲ್ಲಿದೆ ಎಂದು ಇಸ್ರೋ ತಿಳಿಸಿದೆ.
ಮುಂದಿನ ಕಕ್ಷೆ ಇಳಿಸುವಿಕೆ ಪ್ರಕ್ರಿಯೆ ಸೆಪ್ಟಂಬರ್ 4ರಂದು ಮುಂಜಾನೆ 3.30 ಮತ್ತು 4.30ರ ಮಧ್ಯೆ ನಡೆಯಲಿದೆ. ಜುಲೈ 22ರಂದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಚಂದ್ರಯಾನ 2 ಭೂಮಿಯ ಸುತ್ತ 23 ದಿನಗಳ ಕಾಲ ಸುತ್ತು ಹೊಡೆದ ನಂತರ ಆಗಸ್ಟ್ 14ರಂದು ಚಂದ್ರನತ್ತ ಪ್ರಯಾಣ ಬೆಳೆಸಿತ್ತು.





