ಬ್ಯಾಂಕ್ ವಿಲೀನೀಕರಣ: ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು, ಸೆ.3: ಬ್ಯಾಂಕ್‌ಗಳ ವಿಲೀನೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಸಿಐಟಿಯು, ಬಿಇಎಫ್‌ಐ, ಡಿವೈಎಫ್‌ಐ, ಎಐಕೆಎಸ್‌ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನಾ ಪ್ರದರ್ಶನ ಜರುಗಿತು.
ಪ್ರತಿಭಟನಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಬ್ಯಾಂಕ್ ನೌಕರರ ಸಂಘಟನೆ(ಬಿಇಎಫ್‌ಐ)ಯ ರಾಷ್ಟ್ರೀಯ ನಾಯಕ ಬಿ.ಎಂ.ಮಾಧವ, 10 ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಿ ನಾಲ್ಕು ಬ್ಯಾಂಕುಗಳನ್ನಾಗಿ ಮಾಡುವ ಕ್ರಮವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಘೋಷಿಸಿರುವುದರಿಂದ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಎಂದು ಹೆಸರಾಗಿರುವ ಅವಿಭಜಿತ ದ.ಕ.ಜಿಲ್ಲೆಯ ಪ್ರಮುಖ ಬ್ಯಾಂಕುಗಳೇ ತಮ್ಮ ಹೆಸರನ್ನು ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
1969ರಲ್ಲಿ ನಡೆದ ಬ್ಯಾಂಕ್ ರಾಷ್ಟ್ರೀಕರಣದಿಂದಾಗಿ ಬ್ಯಾಂಕುಗಳು ಭಾರತದ ಗ್ರಾಮೀಣ ಪ್ರದೇಶಗಳಿಗೂ ನಗರದ ಬೀದಿಬೀದಿಗಳಿಗೂ ವಿಸ್ತರಿಸಿತು. ಸಾಮಾನ್ಯ ಜನರೂ ಬ್ಯಾಂಕಿಗೆ ಸಂಪರ್ಕ ಹೊಂದುವಂತಾಯಿತು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಪಶ್ಚಿಮ ರಾಷ್ಟ್ರಗಳ ಬ್ಯಾಂಕುಗಳು ದಿವಾಳಿ ಹೊಂದಿದ್ದರೂ, ಭಾರತದ ಆರ್ಥಿಕತೆ ಮಾತ್ರ ಭದ್ರವಾಗಿ ಉಳಿಯಿತು. ಇದಕ್ಕೆ ಭಾರತದ ಬ್ಯಾಂಕುಗಳು ರಾಷ್ಟ್ರೀಕರಣಗೊಂಡದ್ದೇ ಕಾರಣವಾಗಿದೆ ಎಂದು ಹೇಳಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಬ್ಯಾಂಕುಗಳು, ಎಲ್‌ಐಸಿ ಸೇರಿದಂತೆ ಸಾರ್ವಜನಿಕ ಆರ್ಥಿಕ ಸಂಸ್ಥೆಗಳು ರಾಷ್ಟ್ರದ ಆರ್ಥಿಕತೆಗೆ ಬುನಾದಿಯಾಗಿದ್ದು, ಖಾಸಗಿ ರಂಗದ ಕ್ರಿಯಾಶೀಲತೆಗೆ ದಾರಿ ಮಾಡಿಕೊಟ್ಟಿತು. ಈಗ ಅದೇ ಖಾಸಗಿರಂಗ ಬೃಹದಾಕಾರವಾಗಿ ಬೆಳೆದು ಸಾರ್ವಜನಿಕ ರಂಗವನ್ನೇ ಬಲಿ ತೆಗೆದುಕೊಳ್ಳಲು ಹೊರಟಿದೆ. ಸಾರ್ವಜನಿಕ ರಂಗದ ಆರ್ಥಿಕ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಕಾರಣವಾಯಿತು. ಅಲ್ಲದೆ, ಬಡತನ ನಿರ್ಮೂಲನೆಗೂ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ನಾಯಕ ಪಿ.ಆರ್.ಕಾರಂತ ಮಾತನಾಡಿ, ರಾಷ್ಟ್ರೀಕರಣಕ್ಕೂ ಮುನ್ನ ಬ್ಯಾಂಕ್ ಶಾಖೆಗಳು ದೇಶಾದ್ಯಂತ 1600 ಇದ್ದದ್ದು ಈಗ ಒಂದು ಲಕ್ಷಕ್ಕೂ ಮೀರಿದೆ. ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಠೇವಣಿ ಇದೆ. ಇದು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ. ಬಡವರು ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದಾರೆ. ಸಾಮಾನ್ಯ ಜನರು ಜಮೆ ಮಾಡಿದ ಹಣವನ್ನು ಶ್ರೀಮಂತ ಉದ್ಯಮಿಗಳು ಪಡೆದು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಇಂದು ವಿಲೀನೀಕರಣದಿಂದ ಬ್ಯಾಂಕಿಂಗ್ ಸೇವೆಯನ್ನು ಬಡವರಿಂದಲೇ ಕಿತ್ತುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಬ್ಯಾಂಕ್ ನೌಕರರ ಸಂಘಟನೆಯ ಹಿರಿಯ ಮುಖಂಡರಾದ ಟಿ.ಆರ್. ಭಟ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ರೈತ ಸಂಘದ ಜಿಲ್ಲಾ ನಾಯಕರಾದ ಕೆ.ಯಾದವ ಶೆಟ್ಟಿ ಮಾತನಾಡಿದರು.
ಕರಾವಳಿ ಜಿಲ್ಲೆಯ ಬ್ಯಾಂಕುಗಳಿಗೆ ಒದಗಿದ ಸಂಕಷ್ಟಗಳ ಬಗ್ಗೆ ಜಿಲ್ಲೆಯ ಕಲಾವಿದ ಹುಸೈನ್ ಕಾಟಿಪಳ್ಳ ಸ್ವತಃ ರಚಿಸಿದ ಹಾಡನ್ನು ಹಾಡಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು, ಬ್ಯಾಂಕುಗಳ ವಿಲೀನೀಕರಣ ಬೇಡವೇ ಬೇಡ,ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಇರಲೇಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಸುನಿಲ್‌ಕುಮಾರ್ ಬಜಾಲ್, ಯು.ಬಿ.ಲೋಕಯ್ಯ, ಶಿವಕುಮಾರ್, ರಮಣಿ, ಬ್ಯಾಂಕ್ ನೌಕರರ ಸಂಯುಕ್ತ ಸಮಿತಿಯ ಮುಖಂಡರಾದ ವಿನ್ಸೆಂಟ್ ಡಿಸೋಜ, ಕೆ.ರಾಘವ, ಸತೀಶ್ ಶೆಟ್ಟಿ, ಸುಧೀಂದ್ರ, ಬಿಎಎಫ್‌ಐ ಮುಖಂಡರಾದ ಪುರುಷೋತ್ತಮ ಪೂಜಾರಿ, ಸುನಿಲ್ ರಾಜ್, ಡಿವೈಎಫ್‌ಐ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು, ರೈತ ಸಂಘದ ಮುಖಂಡರಾದ ಸದಾಶಿವದಾಸ್, ವಾಸುದೇವ ಉಚ್ಚಿಲ್, ವಿಮಾ ನೌಕರರ ಸಂಘದ ಮುಖಂಡರಾದ ರಾಘವೇಂದ್ರ ರಾವ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖಂಡರಾದ ಮನೋಜ್ ವಾಮಂಜೂರು, ಎಸ್‌ಎಫ್‌ಐ ಜಿಲ್ಲಾ ನಾಯಕ ಸಿನಾನ್ ಬೆಂಗ್ರೆ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ತಿಮ್ಮಯ್ಯ ಕೊಂಚಾಡಿ, ನಿವೃತ್ತ ಪೋಲಿಸ್ ಅಧಿಕಾರಿಗಳಾದ ಟಿಸಿಎಂ ಶರೀಫ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳಿಪ್ಪಾಡಿ, ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ, ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ, ವಾಹನ ಚಾಲಕರ ಸಂಘದ ಮುಖಂಡರಾದ ರೆಹಮಾನ್ ಖಾನ್, ನರೇಂದ್ರ ಹೊಯಿಗೆಬೈಲ್, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್, ಜೆ.ಇಬ್ರಾಹೀಂ ಜೆಪ್ಪು, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.








