ಗಣೇಶ ಮಂಟಪ ಪ್ರವೇಶಕ್ಕೆ ದಲಿತ ಶಾಸಕಿಗೆ ತಡೆ

ಅಮರಾವತಿ,ಸೆ.3: ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕಾಗಿ ಆಂಧ್ರ ಪ್ರದೇಶದ ತಾಡಿಕೊಂಡ ವಿಧಾನಸಭಾ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕಿ ಉಂದವಲ್ಲಿ ಶ್ರೀದೇವಿ ಅವರು ಗಣೇಶ ಮಂಟಪವನ್ನು ಪ್ರವೇಶಿಸುವುದನ್ನು ತಡೆದಿರುವ ಘಟನೆ ಅವರದೇ ಕ್ಷೇತ್ರದ ಅನಂತಾವರಮ್ ಗ್ರಾಮದಲ್ಲಿ ನಡೆದಿದೆ.
ಗಣೇಶನನ್ನು ‘ಅಪವಿತ್ರ’ಗೊಳಿಸಿದ್ದಕ್ಕಾಗಿ ವೃತ್ತಿಯಿಂದ ವೈದ್ಯೆಯಾಗಿರುವ ಶ್ರೀದೇವಿ ಮೇಲ್ಜಾತಿಗೆ ಸೇರಿದ ಟಿಡಿಪಿ ಕಾರ್ಯಕರ್ತರಿಂದ ಪ್ರತಿಭಟನೆ ಎದುರಿಸಿದ್ದಾರೆ. ಟಿಡಿಪಿ ನಾಯಕರು ಅವರು ಮಂಟಪವನ್ನು ಪ್ರವೇಶಿಸದಂತೆ ತಡೆಯುತ್ತಿರುವ ಮತ್ತು ಜಾತಿ ನಿಂದನೆ ಮಾಡುತ್ತಿರುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ.
ಮಾದಿಗ ಸಮುದಾಯಕ್ಕೆ ಸೇರಿದ ಶ್ರೀದೇವಿ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿಯವರ ಪುಣ್ಯತಿಥಿಯ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅನಂತಾವರಮ್ಗೆ ಭೇಟಿ ನೀಡಿದ್ದರು. ಈ ಸಂದರ್ಭ ಗ್ರಾಮದಲ್ಲಿಯ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ ಮಂಟಪಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ಈ ಬಗ್ಗೆ ಥಲ್ಲೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





