ಫೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ: ಬಾಲಕನ ಹೃದಯದಲ್ಲಿದ್ದ 160 ಸಿಸ್ಟ್ಗಳ ನಿರ್ಮೂಲನೆ
ಬೆಂಗಳೂರು, ಸೆ.3: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡದಿಂದ 12ವರ್ಷ ವಯಸ್ಸಿನ ಇರಾಕ್ ದೇಶದ ಬಾಲಕನ ಹೃದಯದಲ್ಲಿದ್ದ 160 ಸಣ್ಣ ಗಾತ್ರದ ಸಿಸ್ಟ್ಗಳನ್ನು (ನೀರು ತುಂಬಿದ ಚೀಲಗಳು) ಯಶಸ್ವಿಯಾಗಿ ಹೊರತೆಗೆಯಲಾಗಿದೆ. ವೈದ್ಯರ ತಂಡದ ನೇತೃತ್ವವನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞ ಡಾ.ವಿವೇಕ್ ಜವಳಿ ಹಾಗೂ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ನಿಶ್ಚಲ್ ರಾಜೇಂದ್ರ ಪಾಂಡ್ಯ ವಹಿಸಿ, ಸುಮಾರು 4ಗಂಟೆಗೂ ಹೆಚ್ಚು ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಈ ವೇಳೆ ಫೋರ್ಟಿಸ್ ಆಸ್ಪತ್ರೆಯ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ನಿಶ್ಚಲ್ ರಾಜೇಂದ್ರ ಪಾಂಡ್ಯ ಮಾತನಾಡಿ, ಹೃದಯದ ಒಳಗೆ ಹೈಡೇಟಿಡ್ ಸಿಸ್ಟ್ಗಳು ಇರುವ ಪ್ರಕರಣಗಳು ಅಷ್ಟು ಸಾಮಾನ್ಯವಾಗಿರುವುದಿಲ್ಲ. ಈ ಪ್ರಕರಣದಲ್ಲಿ ಈ ಬಾಲಕನ ಪೋಷಕರು ಅವನಿಗೆ ದೀರ್ಘಕಾಲದ ಕೆಮ್ಮು ಮತ್ತು ಜ್ವರ ಇದೆಯೆಂದು ನಮ್ಮಲ್ಲಿ ಕರೆತಂದಿದ್ದರು ಎಂದರು.
ಇರಾಕ್ನಲ್ಲಿ ತೆಗೆಯಲಾದ ಸಿಟಿ ಸ್ಕಾನ್ನಲ್ಲಿ ಹೃದಯದ ಒಳಗೆ ಗೋಲಾಕಾರದ ರಚನೆ ಇರುವುದು ಕಂಡುಬಂದಿತ್ತು. ಮುಂದಿನ ವೈದ್ಯಕೀಯ ತನಿಖೆಯ ನಂತರ ಪ್ಲಮ್ ಹಣ್ಣಿನ ಗಾತ್ರದ ಸಿಸ್ಟಿಕ್ ಲೀಜೆನ್ ಚೀಲ ಜೊತೆಗೆ ಅದರೊಳಗೆ ಹಲವಾರು ಎಕೊಜೆನಿಕ್ ಸಿಸ್ಟ್ಗಳು ಇರುವುದು ಕಂಡುಬಂದಿತ್ತು. ಅದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಈ ಕೋಶಗಳು ಸಿಡಿದು ದೇಹದ ಎಲ್ಲೆಡೆಗೆ ಹರಡುವ ಸಾಧ್ಯತೆ ಇತ್ತು. ನಾಲ್ಕು ಗಂಟೆಗಳ ದೀರ್ಘ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆವು ಎಂದು ಅವರು ವಿವರಿಸಿದರು.