ಚುನಾವಣಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬಳಕೆ ಉಪಯುಕ್ತ: ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ

ಬೆಂಗಳೂರು, ಸೆ.4: ಚುನಾವಣಾ ಪ್ರಕ್ರಿಯೆಗಳಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ನಮ್ಮ ಮುಂದಿರುವ ಸವಾಲುಗಳು ಹಾಗೂ ಉಪಕ್ರಮಗಳ ಕುರಿತು ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಹಾಗೂ ಎ-ವೆಬ್ ಅಧ್ಯಕ್ಷ ಸುನೀಲ್ ಅರೋರಾ ತಿಳಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಭಾರತ ಚುನಾವಣಾ ಆಯೋಗ ಸೆ.2 ರಿಂದ 4ರವರೆಗೆ ಆಯೋಜಿಸಿದ ಅಸೋಸಿಯೇಷನ್ ಆಫ್ ವರ್ಲ್ಡ್ ಎಲೆಕ್ಷನ್ ಬಾಡೀಸ್(ಎ-ವೆಬ್)ನ ನಾಲ್ಕನೇ ಸಾಮಾನ್ಯ ಸಭೆ ಹಾಗೂ ಸಮ್ಮೇಳನದಲ್ಲಿ ಚರ್ಚೆಯಾದ ವಿಷಯಗಳ ಕುರಿತು ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 2019-21ರವರೆಗೆ ಭಾರತ ಚುನಾವಣಾ ಆಯೋಗ(ಇಸಿಐ)ಕ್ಕೆ ಎ-ವೆಬ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎ-ವೆಬ್‌ನ ಸದಸ್ಯ ರಾಷ್ಟ್ರಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಯಾವ ಕಾರಣಕ್ಕಾಗಿ ಈ ವೇದಿಕೆಯನ್ನು ರಚನೆ ಮಾಡಲಾಗಿದೆಯೋ ಅದನ್ನು ಕಾರ್ಯಗತಗೊಳಿಸಲು ಗರಿಷ್ಠ ಪ್ರಯತ್ನ ಮಾಡುತ್ತೇವೆ ಎಂದು ಸುನೀಲ್ ಅರೋರಾ ಹೇಳಿದರು.
ಎ-ವೆಬ್ ಸ್ಥಾಪನೆಯಾದ ದಿನದಿಂದಲೂ ಭಾರತ ಚುನಾವಣಾ ಆಯೋಗ ಅದರ ಜೊತೆ ಇದೆ. ಹೊಸದಿಲ್ಲಿಯಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್‌ಮೆಂಟ್ (ಐಐಐಡಿಇಎಂ) ಸಂಸ್ಥೆಯಲ್ಲಿ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ಡಾಕ್ಯುಮೆಂಟರಿ, ಸಂಶೋಧನೆ ವಿಭಾಗದಲ್ಲಿ ತರಬೇತಿ ನೀಡಿ, ಸಾಮರ್ಥ್ಯ ವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
45 ದೇಶಗಳ 123 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. 9 ರಾಷ್ಟ್ರಗಳು ಸಮ್ಮೇಳನದಲ್ಲಿ ವಿಷಯ ಮಂಡನೆ ಮಾಡಿವೆ. ಲೋಪದೋಷರಹಿತ ಚುನಾವಣೆಗಳನ್ನು ಯಾವ ರೀತಿಯಲ್ಲಿ ನಡೆಸಬಹುದು ಎಂಬುದರ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ಸುನೀಲ್ ಅರೋರಾ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳ ಸಾಧಕ, ಬಾಧಕಗಳ ಬಗ್ಗೆಯೂ ಚರ್ಚೆಯಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಅದೊಂದು ಉಪಯುಕ್ತವಾದ ಸಾಧನವಾಗುತ್ತದೆ. ಆದರೆ, ಕೆಲವೊಮ್ಮೆ ಅವುಗಳ ಬಳಕೆಯಲ್ಲಿ ಅಪಾಯ, ಅಡಚಣೆಗಳು ಇರುತ್ತವೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮಗಳು ಹಾಗೂ ತಂತ್ರಜ್ಞಾನ ಸಹಯೋಗದೊಂದಿಗೆ ಜನಸಾಮಾನ್ಯರಲ್ಲಿ ಚುನಾವಣಾ ಪ್ರಕ್ರಿಯೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುವ 6-8 ತಿಂಗಳು ಮುನ್ನವೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಯಾವ ರೀತಿಯ ಸುಧಾರಣೆಗಳನ್ನು ತರಬಹುದು ಎಂಬುದರ ಕುರಿತು ಸಂಸತ್ತಿನ ಸ್ಥಾಯಿ ಸಮಿತಿಯ ವರದಿ ಬರಬೇಕು. ಆ ವರದಿ ನೀಡುವ ಶಿಫಾರಸ್ಸುಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುನೀಲ್ ಅರೋರಾ ತಿಳಿಸಿದರು.
ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಲು ಸಾಧ್ಯವಿಲ್ಲ. ಅನೇಕ ಮಂದಿ ಅನೇಕ ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ನಾನು ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಉಲ್ಲೇಖಿಸುವುದಿಲ್ಲ. ಆದರೆ, ಇವಿಎಂನ ಕಾರ್ಯನಿರ್ವಹಣೆ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಅವರು ಹೇಳಿದರು.
2014ರ ಲೋಕಸಭಾ ಚುನಾವಣೆಯ ಬಳಿಕ ದಿಲ್ಲಿ ವಿಧಾನಸಭೆಯ ಚುನಾವಣೆ ನಡೆಯಿತು. ಅಲ್ಲಿನ ವ್ಯತಿರಿಕ್ತವಾದ ಫಲಿತಾಂಶ ಬಂದಿದೆ. ಅದೇ ರೀತಿ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಬೇರೆ ರೀತಿಯಲ್ಲಿ ಬಂದಿವೆ ಎಂದು ಸುನೀಲ್ ಅರೋರಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದ ಮುಖ್ಯಸ್ಥ ಹಾಗೂ ಎ-ವೆಬ್ ಉಪಾಧ್ಯಕ್ಷ ಗ್ಲೆನ್‌ವುಮಾ ಮಶಿನಿನಿ, ಮಹಾ ಪ್ರಧಾನ ಕಾರ್ಯದರ್ಶಿ ಕೊರಿಯಾ ಗಣರಾಜ್ಯದ ಜೊಂಗ್‌ಯ್ಯುನ್ ಚೋಯ್, ಭಾರತದ ಚುನಾವಣಾ ಆಯುಕ್ತರಾದ ಅಶೋಕ್ ಲವಾಸ, ಸುಶೀಲ್ ಚಂದ್ರ, ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ, ವಕ್ತಾರ ಎಸ್.ಶರಣ್, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.
ಒಮ್ಮತದ ಅಭಿಪ್ರಾಯ ಮುಖ್ಯ
‘ಒಂದು ದೇಶ, ಒಂದು ಚುನಾವಣೆ’ ಕುರಿತು ಚರ್ಚೆಗಳು ನಡೆಯುತ್ತಿವೆ. ಚುನಾವಣಾ ಆಯೋಗದ ಸಹಮತವು ಇದೆ. ಆದರೆ, 1967ರಿಂದ ಲೋಕಸಭೆ ಹಾಗೂ ಅನೇಕ ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳು ಆಯಾ ಸಂದರ್ಭಕ್ಕೆ ತಕ್ಕಂತೆ ನಡೆದಿವೆ. ಒಂದು ದೇಶ, ಒಂದು ಚುನಾವಣೆ ನಡೆಸಲು ಸಾಂವಿಧಾನಿಕವಾಗಿ ಹಲವಾರು ತಿದ್ದುಪಡಿಗಳು ಆಗಬೇಕು. ಅದಕ್ಕೆ ಮುಂಚೆ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಚರ್ಚೆ ಮಾಡಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕಿದೆ.
-ಸುನೀಲ್ ಅರೋರಾ
ಎನ್‌ಆರ್‌ಸಿ-ಮತದಾರರು
ಅಸ್ಸಾಂ ರಾಜ್ಯದಲ್ಲಿನ ಎನ್‌ಆರ್‌ಸಿ ಕುರಿತು ಈಗಾಗಲೇ ಕೇಂದ್ರ ಗೃಹ ಇಲಾಖೆ ಸ್ಪಷ್ಟೀಕರಣ ನೀಡಿದೆ. ಎನ್‌ಆರ್‌ಸಿಯಿಂದ ಹೊರಗಿರುವವರ ಬಗ್ಗೆ ನ್ಯಾಯಾಧೀಕರಣ ತೀರ್ಮಾನ ಮಾಡುತ್ತದೆ. ಅಲ್ಲಿಯವರೆಗೆ ಅವರನ್ನು ನಾವು ಮತದಾರರು ಎಂದೇ ಪರಿಗಣಿಸುತ್ತೇವೆ.
-ಸುನೀಲ್ ಅರೋರಾ
.jpg)







