ದೇಶಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಳಿಸುತ್ತೇವೆ: ಕೇಂದ್ರ ಸರಕಾರಕ್ಕೆ ಐಎಂಎ ಎಚ್ಚರಿಕೆ

ಟೋಕ್(ಅಸ್ಸಾಂ),ಸೆ.4: ವೈದ್ಯರ ವಿರುದ್ಧ ಹಿಂಸಾಚಾರವನ್ನು ತಡೆಯಲು ತಕ್ಷಣವೇ ಕಾನೂನೊಂದನ್ನು ತರಲು ಕೇಂದ್ರವು ವಿಫಲಗೊಂಡರೆ ದೇಶಾದ್ಯಂತ ಅನಿರ್ದಿಷ್ಟಾವಧಿ ವೈದ್ಯಕೀಯ ಸೇವೆ ಸ್ಥಗಿತವನ್ನು ಆರಂಭಿಸುವುದಾಗಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಅಧ್ಯಕ್ಷ ಡಾ.ಶಂತನು ಸೇನ್ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಮಿನ ಚಹಾ ತೋಟವೊಂದರಲ್ಲಿ ವೈದ್ಯ ದೇಬನ್ ದತ್ತಾ ಅವರ ಮೇಲೆ ಮಾರಣಾಂತಿಕ ಹಲ್ಲೆಯ ಕುರಿತು 24 ಗಂಟೆಗಳಲ್ಲಿ ಹೇಳಿಕೆಯೊಂದನ್ನು ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರನ್ನೂ ಐಎಂಎ ಆಗ್ರಹಿಸಿದೆ. ಚಹಾ ತೋಟದ ಕಾರ್ಮಿಕನೋರ್ವನ ಸಂಬಂಧಿಗಳು ನಡೆಸಿದ್ದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಡಾ.ದತ್ತಾ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕೆಲವು ಐಎಂಎ ಸದಸ್ಯರೊಂದಿಗೆ ಇಲ್ಲಿ ಡಾ.ದತ್ತಾ ಅವರ ಕುಟುಂಬವನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಡಾ.ಸೇನ್ ಅವರು, "ವೈದ್ಯರ ಮೇಲಿನ ಹಲ್ಲೆಗಳು ಮುಂದುವರಿದಿವೆ. ಇನ್ನು ಇದನ್ನು ಸಹಿಸಲು ಸಾಧ್ಯವಿಲ್ಲ. ನಾವು ಅಂತಿಮ ಘಟ್ಟವನ್ನು ತಲುಪಿದ್ದೇವೆ ಮತ್ತು ನಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ. 24 ಗಂಟೆಯೊಳಗೆ ಕೇಂದ್ರೀಯ ಶಾಸನ ಮತ್ತು ಅಸ್ಸಾಂ ಮುಖ್ಯಮಂತ್ರಿಗಳ ಹೇಳಿಕೆ ಹೊರಬೀಳದಿದ್ದರೆ ಸರಕಾರ ಮತ್ತು ಇಡೀ ದೇಶ ಪರಿಣಾಮಗಳನ್ನು ಎದುರಿಸಲು ಸಿದ್ಧವಿರಬೇಕು" ಎಂದರು.
ವೈದ್ಯರ ವಿರುದ್ಧ ಹಿಂಸೆಯನ್ನು ತಡೆಯಲು ಕೇಂದ್ರೀಯ ಕಾನೂನು ಜಾರಿಯ ತುರ್ತು ಅಗತ್ಯಕ್ಕೆ ಒತ್ತು ನೀಡಿ ಐಎಂಎ ಪ್ರಧಾನಿ,ಗೃಹಸಚಿವರು,ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದಿದೆ ಎಂದು ತೃಣಮೂಲ ರಾಜ್ಯಸಭಾ ಸದಸ್ಯರೂ ಆಗಿರುವ ಡಾ.ಸೇನ್ ತಿಳಿಸಿದರು.
ಡಾ.ದತ್ತಾ ಅವರ ಮೇಲಿನ ಮಾರಣಾಂತಿಕ ದಾಳಿಯನ್ನು ವಿರೋಧಿಸಿ ಮಂಗಳವಾರ ಅಸ್ಸಾಮಿನ ವೈದ್ಯರು ನಡೆಸಿದ 24 ಗಂಟೆಗಳ ಮುಷ್ಕರ ಅತ್ಯಂತ ಯಶಸ್ವಿಯಾಗಿದೆ. 24 ಗಂಟೆಗಳಲ್ಲಿ ಮುಖ್ಯಮಂತ್ರಿಗಳು ಹೇಳಿಕೆ ನೀಡದಿದ್ದರೆ ತುರ್ತು ಸೇವೆಗಳು ಸೇರಿದಂತೆ ರಾಜ್ಯದ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದ ಅವರು,ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಜಾಮೀನು ನೀಡಬಾರದು ಎಂದು ಐಎಂಎ ಆಗ್ರಹಿಸುತ್ತದೆ ಎಂದರು.
ಜೋರ್ಹಾತ್ ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ವಿಚಾರಣೆ ನಡೆಸಿ ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.







