ಅಮೆರಿಕ-ತಾಲಿಬಾನ್ ಒಪ್ಪಂದದ ಬಗ್ಗೆ ಅಫ್ಘಾನ್ ಸಂದೇಹ

ಕಾಬೂಲ್, ಸೆ. 4: ಅಮೆರಿಕ ಮತ್ತು ತಾಲಿಬಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದದ ಬಗ್ಗೆ ಅಫ್ಘಾನ್ ಸರಕಾರ ಬುಧವಾರ ಸಂದೇಹಗಳನ್ನು ವ್ಯಕ್ತಪಡಿಸಿದೆ. ಈ ಒಪ್ಪಂದವು ಒಡ್ಡುವ ಅಪಾಯಗಳ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ಅದು ಹೇಳಿದೆ.
ಈ ವಾರ ಕಾಬೂಲ್‌ನಲ್ಲಿದ್ದ ಅಮೆರಿಕದ ವಿಶೇಷ ಪ್ರತಿನಿಧಿ ಝಲ್ಮಾಯ್ ಖಲೀಲ್‌ಝಾದ್, ತಾಲಿಬಾನ್ ಜೊತೆಗೆ ಅಮೆರಿಕವು ಹೊಂದಲು ಬಯಸುವ ಸಂಭಾವ್ಯ ಒಪ್ಪಂದದ ಬಗ್ಗೆ ಅಫ್ಘಾನಿಸ್ತಾನದ ಅಧಿಕಾರಿಗಳಿಗೆ ವಿವರಗಳನ್ನು ನೀಡಿದರು.
ಶಾಂತಿ ಪ್ರಕ್ರಿಯೆಯಲ್ಲಿ ಆಗುವ ಯಾವುದೇ ಬೆಳವಣಿಗೆಯನ್ನು ಅಫ್ಘಾನ್ ಸರಕಾರ ಬೆಂಬಲಿಸುತ್ತದೆಯಾದರೂ, ಯಾವುದಾದರೂ ನಕಾರಾತ್ಮಕ ಪರಿಣಾಮಗಳು ಇದ್ದರೆ ಅವುಗಳನ್ನು ನಿವಾರಿಸಿಕೊಳ್ಳಲು ಬಯಸುತ್ತದೆ ಎಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯ ವಕ್ತಾರ ಸಿದ್ದಿಕ್ ಸಿದ್ದೀಕಿ ಹೇಳಿದರು.
‘‘ಕಾಬೂಲ್ ಕಳವಳಗೊಂಡಿದೆ. ಹಾಗಾಗಿ, ನಾವು ಒಪ್ಪಂದದ ವಿವರಗಳನ್ನು ಕೇಳುತ್ತಿದ್ದೇವೆ. ಆ ಮೂಲಕ, ನಾವು ಸಂಭಾವ್ಯ ಅಪಾಯಗಳು ಮತ್ತು ನಕಾರಾತ್ಮಕ ಪರಿಣಾಮಗಳನ್ನು ವಿಶ್ಲೇಷಣೆ ಮಾಡಬಹುದಾಗಿದೆ ಹಾಗೂ ಅವುಗಳನ್ನು ತಡೆಯುವ ಮಾರ್ಗೋಪಾಯಗಳನ್ನು ಚರ್ಚಿಸಬಹುದಾಗಿದೆ’’ ಎಂದು ಟ್ವಿಟರ್‌ನಲ್ಲಿ ಸಿದ್ದೀಕಿ ಹೇಳಿದ್ದಾರೆ.





