‘ಒನ್ ಸ್ಮಾರ್ಟ್‌ಸಿಟಿ ಒನ್ ಇಂಪ್ಯಾಕ್ಟ್’ ಕಾರ್ಯಕ್ರಮದಲ್ಲಿ ಸಂವಾದ ವೈಭವದ ‘ಹಸಿರು ಮಂಗಳೂರು’ ಪರಿಕಲ್ಪನೆ

ಮಂಗಳೂರು, ಸೆ.4: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ‘ಒನ್ ಸ್ಮಾರ್ಟ್‌ಸಿಟಿ ಒನ್ ಇಂಪ್ಯಾಕ್ಟ್’ ಕಾರ್ಯಕ್ರಮದಲ್ಲಿ ವೃಕ್ಷ ಪ್ರೇಮಿಗಳು, ಅಧಿಕಾರಿಗಳು, ಎನ್‌ಜಿಒ ಹಾಗೂ ನಾಗರಿಕರ ಜತೆ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಮಂಗಳೂರಿನ ವೈಭವವನ್ನು ಮರುಕಳಿಸುವ ‘ಹಸಿರು ಮಂಗಳೂರು’ ಪರಿಕಲ್ಪನೆಗೆ ನೀರೆರೆಯಲಾಯಿತು.
ಮಂಗಳೂರನ್ನು ಮತ್ತೆ ಹಸಿರು ಮಾಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಒಂದು ವರ್ಷದ ಯೋಜನೆ ಅನುಷ್ಠಾನ ತರುವ ಉದ್ದೇಶದಿಂದ ಈ ಸಂದರ್ಭ ಸಂವಾದ ನಡೆಯಿತು.
ಸಂವಾದದಲ್ಲಿ ನೂತನ ಯೋಜನೆಗೆ ಪೀಠಿಕೆ ಹಾಕಿದ ಮಂಗಳೂರು ಸ್ಮಾರ್ಟ್‌ಸಿಟಿ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಮಹೇಶ್‌ಕುಮಾರ್, ‘ಕಳೆದ 10 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಶೇ.50ರಷ್ಟು ಹಸಿರು ಪ್ರದೇಶವಿತ್ತು. ನಗರದ ಕನಿಷ್ಠ ಶೇ.33ರಷ್ಟು ಭಾಗದಲ್ಲಿ ಹಸಿರು ಇರಲೇಬೇಕು. ಈಗ ಇರುವುದು ಕೇವಲ ಶೇ.22.8ರಷ್ಟು ಮಾತ್ರ. ಶೇ.50ರಷ್ಟು ಹಸಿರು ಪ್ರದೇಶ ಬೆಳೆಸಲೇಬೇಕು’ ಎಂದು ಕಾರ್ಯಕ್ರಮದಲ್ಲಿ ಯೋಜನೆಯ ಇಂಚಿಂಚೂ ಮಾಹಿತಿಯನ್ನು ಒದಗಿಸಿದರು.
ಮಂಗಳೂರು ಬಿಷಪ್ ಅತಿವಂದನೀಯ ಡಾ. ಪೀಟರ್ ಪೌಲ್ ಸಲ್ದಾನ ಮಾತನಾಡಿ, ಮಂಗಳೂರಿನಲ್ಲಿ ಪಾದಚಾರಿಗಳು ರಸ್ತೆ ದಾಟಬೇಕಾದರೂ ಪರದಾಡುವಂಥ ಪರಿಸ್ಥಿತಿ ಇದೆ. ಪಾದಚಾರಿ ಮಾರ್ಗ, ಚರಂಡಿ ಇಲ್ಲ. ರಸ್ತೆಯಲ್ಲೇ ನೀರು ಹರಿಯುತ್ತದೆ. ಇಲ್ಲಿ ಮನುಷ್ಯನಿಗೆ ಗೌರವವೇ ಇಲ್ಲ. ಮನುಷ್ಯನ ಬದುಕಿಗೆ ಗೌರವ ತರುವ ನಗರ ಮಾತ್ರ ಸ್ಮಾರ್ಟ್ ನಗರವಾಗಬಹುದು ಎಂದು ಪ್ರತಿಪಾದಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಬಿಷಪ್ ಅತಿವಂದನೀಯ ಡಾ.ಪೀಟರ್ ಪೌಲ್ ಸಲ್ದಾನ, ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ, ಸ್ಮಾರ್ಟ್‌ಸಿಟಿ ಕಂಪೆನಿಯ ನಿರ್ದೇಶಕ ಪಿ.ಡಿ.ಮೆಹ್ತಾ, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಐಸಿಬಿಸಿ ಉಪಾಧ್ಯಕ್ಷ ವೆಂಕಟೇಶ ಪೈ, ಅತಿವಂದನೀಯ ರಿಚರ್ಡ್ ಡಿಸೋಜ, ಪರಿಸರ ಪ್ರೇಮಿ ಜೀತ್ ಮಿಲಾನ್ ಮತ್ತಿತರಿದ್ದರು.










