ಅಧಿಕ ಅಂತರ್‌ಜಾತಿ ವಿವಾಹಗಳು ಆಶಾದಾಯಕ ಬೆಳವಣಿಗೆ: ಕೇಂದ್ರ ಸಚಿವ ಅಠಾವಳೆ

ಬೆಂಗಳೂರು, ಸೆ.4: ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಂತರ್‌ಜಾತೀಯ ವಿವಾಹಗಳ ಪ್ರಮಾಣ ಅಧಿಕವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಬುಧವಾರ ನಗರದ ಕುಮಾರಕೃಪಾ ಅಥಿತಿ ಗೃಹದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಜಾತಿ ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳು ಅಧಿಕವಾಗಿರುವುದು ವರದಿಯಾಗಿದೆ. ಹಿಂದಿನ ವರ್ಷದಲ್ಲಿ ಸರಿಸುಮಾರು 5273 ಪ್ರಕರಣಗಳು ದಾಖಲಾಗಿವೆ. ಇದು ಅತ್ಯಂತ ಗಂಭೀರವಾದುದಾಗಿದೆ. ಆದರೆ, ಇದರ ನಡುವೆಯೂ ಅಂತರ್‌ಜಾತಿಯ ವಿವಾಹಗಳು ಅಧಿಕವಾಗಿದೆ. ಇದು ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆ ಕಲ್ಪನೆ ಅಡಿಯಲ್ಲಿ ಉತ್ತಮ ಕ್ರಿಯೆಯಾಗಿದೆ ಎಂದು ಅವರು ತಿಳಿಸಿದರು.
ಅಂತರ್ ಜಾತಿಯ ವಿವಾಹವಾಗುವವರಿಗೆ ರಾಜ್ಯ, ಕೇಂದ್ರ ಸರಕಾರದಿಂದ ಸಹಾಯ ಧನವನ್ನು ನೀಡಲಾಗುತ್ತಿದೆ. ಸಾಮಾಜಿಕ ಕಲ್ಯಾಣಗಳ ಇಲಾಖೆ ಅಡಿಯಲ್ಲಿ ವಿವಾಹಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದ ಅಠಾವಳೆ, ಇಂದಿಗೂ ಗ್ರಾಮೀಣ ಭಾಗದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ. ಇದನ್ನು ನೇರವಾಗಿ ನಿರ್ಮೂಲನೆ ಮಾಡುವುದು ಕಷ್ಟ ಸಾಧ್ಯ. ಜಾತಿ ವ್ಯವಸ್ಥೆಯನ್ನು ಮನಸ್ಸಿನಿಂದ ಹೊರ ಹಾಕಬೇಕಿದೆ. ಇದಕ್ಕೆ ರಾಜಕೀಯ ಬೆರೆಸುವುದು ಸೂಕ್ತವಲ್ಲ ಎಂದು ಪ್ರತಿಪಾದಿಸಿದರು.
ಪಿಂಚಣಿ ಯೋಜನೆಯಲ್ಲಿ 9.34 ಲಕ್ಷ ಜನರಿಗೆ ಪಿಂಚಣಿ ಪಡೆಯುತ್ತಿದ್ದಾರೆ. ಉಜ್ವಲ ಯೋಜನೆಯ ಮೂಲಕ ಕರ್ನಾಟಕದಲ್ಲಿ 31 ಲಕ್ಷ 51 ಸಾವಿರ ಜನರು ಸೌಲಭ್ಯ ಪಡೆದಿದ್ದು, ಇಂಡಿಯಾದಲ್ಲಿ 11 ಕೋಟಿಯಷ್ಟು ಕುಟುಂಬಗಳು ಸೌಲಭ್ಯ ಪಡೆದಿವೆ. ಮುದ್ರಾ ಯೋಜನೆ ಅಡಿಯಲ್ಲಿ ದೇಶದಲ್ಲಿ 94 ಕೋಟಿ, ಕರ್ನಾಟಕದಲ್ಲಿ 2 ಕೋಟಿಗೂ ಅಧಿಕ ಜನರು ಫಲಾನುಭವಿಗಳಿದ್ದಾರೆ. ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ 3.52 ಲಕ್ಷ ಫಲಾನುಭವಿಗಳಿದ್ದಾರೆ ಎಂದರು.
ರಾಜ್ಯದಲ್ಲಿ 2018 ರಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸೇರಿ ಸರಕಾರ ರಚನೆ ಮಾಡಬಹುದಿತ್ತು. ಆದರೆ, ಅವರು ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚಿಸಿದರು. ಇದರಿಂದ ಅವರು 14 ತಿಂಗಳು ಏನೂ ಕೆಲಸ ಮಾಡಲಾಗಲಿಲ್ಲ. ನಗು ನಗುತ್ತಿರಬೇಕಾದ ಅವರು ಕಣ್ಣೀರಿಡುವಂತೆ ಮಾಡಿದರು ಎಂದು ಅವರು ವ್ಯಂಗ್ಯವಾಡಿದರು.
ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿತವಾಗಿದೆ ಎಂದು ಅಪವಾದ ಮಾಡುವುದು ಸರಿಯಲ್ಲ. ಕೇಂದ್ರ ಸರಕಾರ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ಉದ್ದೇಶದಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರ್ನಾಟಕಕ್ಕೆ ಕೇಂದ್ರದಿಂದ ಎಲ್ಲ ರೀತಿಯ ನೆರವು ಸಿಗಲಿದೆ.
-ರಾಮದಾಸ್ ಅಠಾವಳೆ, ಕೇಂದ್ರ ರಾಜ್ಯಖಾತೆ ಸಚಿವ







