ಬೆಳ್ತಂಗಡಿ: ಹೃದಯಾಘಾತದಿಂದ ಅಡ್ಕಾಡಿ ಜಗನ್ನಾಥ ಗೌಡ ನಿಧನ

ಬೆಳ್ತಂಗಡಿ: ಜನತಾದಳ ಜಾತ್ಯತೀತ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ, ಸಂಘಟಕ, ಅರಸಿನಮಕ್ಕಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ಅವರು ಸೆ.4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಧ್ಯರಾತ್ರಿ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅದಾಗಲೇ ಅವರು ಮೃತ ಪಟ್ಟಿದ್ದರು ಎಂದು ತಿಳಿದುಬಂದಿದೆ.
ಜಗನ್ನಾಥ ಗೌಡ ಪ್ರಾರಂಭದಿಂದಲೂ ಜನತಾದಳ ಜಾತ್ಯತೀತ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೇ ಪಕ್ಷವನ್ನು ಪ್ರತಿನಿಧಿಸಿ ಅವರ ಬೆಂಬಲಿತರ ತಂಡ ಕಟ್ಟಿಕೊಂಡು ಕಳೆದ 2 ಅವಧಿಯಿಂದ ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಅರಸಿನಮಕ್ಕಿ ಗ್ರಾ.ಪಂ ನಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು ಪ್ರಸ್ತುತ ಉಪಾಧ್ಯಕ್ಷರಾಗಿದ್ದರು.
ಪಕ್ಷದ ತಾಲೂಕು ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇದೀಗ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ಜನತಾದಳದ ಅಧಿಕಾರವಿರುವ ಏಕೈಕ ಪಂಚಾಯತ್ ಹಾಗೂ ಸೇವಾ ಸಹಕಾರಿ ಸಂಘ ಅರಸಿನಮಕ್ಕಿಯೇ ಆಗಿತ್ತು. ರಾಜಕೀಯದೊಂದಿಗೆ ನಾಡಿನ ವಿವಿಧ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಗಳಲ್ಲಿಯೂ ಅವರು ಸದಾ ಸಕ್ರೀಯರಾಗಿದ್ದರು.
ಮೃತರ ಮನೆಗೆ ಮಾಜಿ ಶಾಸಕರುಗಳಾದ ವಸಂತ ಬಂಗೇರ, ಗಂಗಾಧರ ಗೌಡ, ಬೆಳ್ತಂಗಡಿ ತಾ. ಪಂ ಅಧ್ಯಕ್ಷೆ ದಿವ್ಯಜ್ಯೋತಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ, ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೊಟ್ಟಾರಿ, ಜೆಡಿಎಸ್ ತಾ. ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಿರಂಜನ ಭಾವಂತಬೆಟ್ಟು, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ಸೊಸೈಟಿ ಅಧ್ಯಕ್ಷರುಗಳಾದ ಇ. ಸುಂದರಗೌಡ ಉಜಿರೆ, ನಾರಾಯಣ ಗೌಡ ಕೊಕ್ಕಡ, ಧನಂಜಯ ನಿಡ್ಲೆ, ಎನ್ ಲಕ್ಷ್ಮಣ ಗೌಡ ಬಂಗಾಡಿ, ಸಿಪಿಐಎಂ ಮುಖಂಡರಾದ ಶಿವಕುಮಾರ್, ಬಿ.ಎಮ್ ಭಟ್, ಕಾಲಭೈರವೇಶ್ವರ ಒಕ್ಕಲಿಗ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ, ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್, ಮೊದಲಾದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.







