ಕೇವಲ 20 ಶೇ. ಮುದ್ರಾ ಸಾಲ ಫಲಾನುಭವಿಗಳಿಂದ ಉದ್ಯಮ ಆರಂಭ: ವರದಿ

ಹೊಸದಿಲ್ಲಿ,ಸೆ.4: ಕೇಂದ್ರ ಕಾರ್ಮಿಕ ಸಚಿವಾಲಯದ ಕರಡು ವರದಿಯು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಸರಕಾರದ ಮುಂಚೂಣಿಯ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಯಶಸ್ಸಿನ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸಿದೆ. ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ,2018 ಎಪ್ರಿಲ್-ನವೆಂಬರ್ ನಡುವೆ ನಡೆಸಲಾಗಿರುವ ಸಮೀಕ್ಷೆಯು ಮುದ್ರಾ ಸಾಲ ಫಲಾನುಭವಿಗಳ ಪೈಕಿ ಶೇ.20ರಷ್ಟು ಜನರು ಮಾತ್ರ ಹಣವನ್ನು ಹೊಸ ಉದ್ಯಮ ಸ್ಥಾಪನೆಗೆ ಬಳಸಿದ್ದಾರೆ ಮತ್ತು ಇತರರು ತಮ್ಮ ಹಾಲಿ ಉದ್ಯಮವನ್ನು ವಿಸ್ತರಿಸಲು ಉಪಯೋಗಿಸಿಕೊಂಡಿದ್ದಾರೆ ಎನ್ನುವುದನ್ನು ಬೆಳಕಿಗೆ ತಂದಿದೆ.
ಸಮೀಕ್ಷೆಗೊಳಪಡಿಸಲಾದದ 94,375 ಫಲಾನುಭವಿಗಳ ಪೈಕಿ 19,396 (ಶೇ.20.6) ಜನರು ಹೊಸ ಉದ್ಯಮಗಳನ್ನು ಸ್ಥಾಪಿಸಿದ್ದರೆ,ಉಳಿದ 74,979 ಜನರು ಇದ್ದ ಉದ್ಯಮಗಳನ್ನೇ ವಿಸ್ತರಿಸಿದ್ದಾರೆ.
2015 ಎಪ್ರಿಲ್-2017 ಡಿಸೆಂಬರ್ ನಡುವಿನ ಅವಧಿಯಲ್ಲಿ 1.12 ಕೋಟಿ ಹೆಚ್ಚುವರಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸಮೀಕ್ಷೆಯ ವರದಿಯು ಹೇಳುತ್ತಿದೆ. ಇದು ವಿತರಣೆಯಾಗಿರುವ ಸಾಲಗಳ ಒಟ್ಟು ಸಂಖ್ಯೆಯ ಶೇ.10ಕ್ಕಿಂತಲೂ ಕಡಿಮೆಯಾಗಿದೆ. ಯೋಜನೆಯಡಿ ಮೊದಲ ಮೂರು ವರ್ಷಗಳಲ್ಲಿ (2015-2018) 12.27 ಕೋ.ಸಾಲ ಖಾತೆಗಳಿಗೆ ಒಟ್ಟು 5.71 ಲ.ಕೋ.ರೂ.ಗಳನ್ನು ವಿತರಿಸಲಾಗಿದೆ. ಆದರೆ ಕರಡು ವರದಿಯು ಹೊಸ ಉದ್ಯಮಗಳು ಮತ್ತು ಹಾಲಿ ಉದ್ಯಮಗಳು ಸೃಷ್ಟಿಸಿರುವ ಹೆಚ್ಚುವರಿ ಉದ್ಯೋಗಗಳ ಪ್ರತ್ಯೇಕ ಅಂಕಿಸಂಖ್ಯೆಗಳನ್ನು ಒದಗಿಸಿಲ್ಲ ಎಂದು ಕಾರ್ಮಿಕ ಸಚಿವಾಲಯದ ಕರಡು ವರದಿಯು ಲಭ್ಯವಾಗಿರುವ ಪ್ರಮುಖ ಆಂಗ್ಲ ಮಾಧ್ಯಮವೊಂದು ಹೇಳಿದೆ.
ಸೃಷ್ಟಿಯಾಗಿರುವ ಹೆಚ್ಚುವರಿ ಉದ್ಯೋಗಗಳಲ್ಲಿ ಸೇವೆಗಳು ಮತ್ತು ವ್ಯಾಪಾರ ಕ್ಷೇತ್ರದ ಕೊಡುಗೆ ಶೇ.67.57ರಷ್ಟಿದ್ದರೆ,ತಯಾರಿಕೆ ಕೇತ್ರದ ಕೊಡುಗೆ ಕೇವಲ ಶೇ.11.7ರಷ್ಟಿದೆ.
ಯೋಜನೆಯಡಿ ಸೃಷ್ಟಿಯಾಗಿರುವ 1.2 ಕೋ.ಉದ್ಯೋಗಗಳ ಪೈಕಿ ಸುಮಾರು ಅರ್ಧ(51.06 ಲ.) ಸ್ವಯಂ ದುಡಿಯುತ್ತಿರುವ ಉದ್ಯಮಗಳ ಮಾಲಕರಾಗಿದ್ದು,ಇದರಲ್ಲಿ ಸಂಬಳವಿಲ್ಲದೆ ದುಡಿಯುತ್ತಿರುವ ಅವರ ಕುಟುಂಬ ಸದಸ್ಯರೂ ಸೇರಿದ್ದಾರೆ. 60.94 ಲ.ಉದ್ಯೋಗಗಳಿಗೆ ಜನರನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯು ತಿಳಿಸಿದೆ.

2017-18ರಲ್ಲಿ ನಿರುದ್ಯೋಗ ದರವು ಶೇ.6.1ರ ದಾಖಲೆ ಮಟ್ಟದಲ್ಲಿರಲಿದೆ ಎಂದು ಅಂದಾಜಿಸಿದ್ದ ನಿರುದ್ಯೋಗ ಕುರಿತು ರಾಷ್ಟ್ರೀಯ ಮಾದರಿ ಸರ್ವೆ ಕಚೇರಿಯ ಸಮೀಕ್ಷೆಯನ್ನು ಎದುರಿಸಲು ಈ ಅಂಕಿಅಂಶಗಳನ್ನು ಬಳಸಿಕೊಳ್ಳಲು ಸರಕಾರವು ಯೋಜಿಸಿತ್ತು.
ಮುದ್ರಾ ಯೋಜನೆಯನ್ನು 2015ರಲ್ಲಿ ಆರಂಭಿಸಲಾಗಿತ್ತು.







