ಚಿಕ್ಕಮಗಳೂರು: ಡಿಕೆಶಿ ಬಂಧನ ಖಂಡಿಸಿ ವಿವಿಧ ಪಕ್ಷಗಳಿಂದ ರಸ್ತೆ ತಡೆ- ಪ್ರತಿಭಟನಾಕಾರರ ಬಂಧನ, ಬಿಡುಗಡೆ

ಚಿಕ್ಕಮಗಳೂರು, ಸೆ.4: ಕಾಂಗ್ರೆಸ್‍ನ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್, ಸಿಪಿಐ ಪಕ್ಷಗಳ ಬೆಂಬಲದೊಂದಿಗೆ ಬುಧವಾರ ನಗರದಲ್ಲಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಸ್ತೆ ತಡೆ ಮಾಡಿದ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎಂ.ಎಲ್.ಮೂರ್ತಿ, ಎ.ಎನ್.ಮಹೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಸಿಪಿಐ ಮುಖಂಡ ಅಮ್ಜದ್ ಮತ್ತಿತರರ ನೇತೃತ್ವದಲ್ಲಿ ಬುಧವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ನಗರದ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಲ್ಲದೇ ರಸ್ತೆಗೆ ಅಡ್ಡಲಾಗಿ ಕುಳಿತು ರಸ್ತೆ ತಡೆ ಮಾಡಿದರು.
ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಜನಪರ ಆಡಳಿತ ನೀಡುವುದನ್ನು ಬಿಟ್ಟು ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಪಕ್ಷಕ್ಕೆ ಕಗ್ಗಂಟಾಗಿರುವ ಡಿ.ಕೆ.ಶಿವಕುಮಾರ್ ಅವರಂತಹ ಗಟ್ಟಿ ರಾಜಕಾರಣಿಯನ್ನು ಬಗ್ಗುಬಡಿದು ಕಾಂಗ್ರೆಸ್ ಪಕ್ಷದವರ ನೈತಿಕ ಸ್ಥೈರ್ಯವನ್ನು ಅಡಗಿಸುವ ಹಿನ್ನೆಲೆಯಲ್ಲಿ ವಿನಾಕಾರಣ ಇಡಿ ಅಧಿಕಾರಿಗಳ ಮೂಲಕ ಬಂಧಿಸಿರುವುದು ನಾಚಿಕೆಗೇಡಿ ಸಂಗತಿಯಾಗಿದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ದೇಶ ಆರ್ಥಿಕ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ. ಇದನ್ನು ಮರೆಮಾಚಲು ದೇಶದ ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಬಿಜೆಪಿಗೆ ಮುಳ್ಳಾಗಿರುವ ಡಿಕೆಶಿಯಂತಹ ರಾಜಕಾರಣಿಗಳನ್ನು ಸರಕಾರಿ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಛೂ ಬಿಡುತ್ತಿದ್ದಾರೆ. ತಪ್ಪೇ ಮಾಡದವರನ್ನು ಸುಖಾಸುಮ್ಮನೆ ಬಂಧಿಸಿ ಅವರ ತೇಜೋವಧೆಗಿಳಿದಿದ್ದಾರೆ. ಅವರ ನೈತಿಕ ಸ್ಥೈರ್ಯ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಬಿಜೆಪಿಯ ಈ ಲಜ್ಜೆಗೇಡಿ ದುರಾಡಳಿವನ್ನು ಜನತೆ ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದ ಅವರು, ಇಡಿ ಇಲಾಖೆ ಡಿ.ಕೆ.ಶಿವಕುಮಾರ್ ಅವರನ್ನು ವಾಮಮಾರ್ಗದ ಮೂಲಕ ಬಂಧಿಸಿದೆ. ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ದೇಶಾದ್ಯಂದ ಪ್ರತಿಣಭಟನೆಗಳು ಉಗ್ರ ಸ್ವರೂಪ ಪಡೆಯಲಿವೆ ಎಂದು ಎಚ್ಚರಿಸಿದರು.
ರಸ್ತೆ ತಡೆಯಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರ ಇಡೀ ನಗರದಲ್ಲಿ ಸ್ಥಬ್ದಗೊಂಡಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಒತ್ತಾಯಿಸಿದರು. ಪ್ರತಿಭಟನಾ ನಿರತರು ಇದಕ್ಕೆ ಒಪ್ಪದಿದ್ದಾಗ ಪೊಲೀಸರು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ವಾಹನದ ಮೂಲಕ ಪೊಲೀಸ್ ಠಾಣೆಗೆ ಕರೆದೊಯ್ದರು. ಕೆಲ ಹೊತ್ತಿನ ಬಳಿಕ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಹೊಲದಗದ್ದೆ ಗಿರೀಶ್, ಶಿವಾನಂದಸ್ವಾಮಿ, ರೂಬಿನ್ ಮೋಸೆಸ್, ಸವಿತಾ ರಮೇಶ್ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.







