ಬೆಳ್ತಂಗಡಿಯಲ್ಲಿ ನಿರಂತರ ಮಳೆ: ಪ್ರವಾಹದ ಭೀತಿ

ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ ಬೆಳಗ್ಗಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ನದಿಗಳಲ್ಲಿ ಆಗಾಗ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಮಲೆನಾಡಿನ ಜನರು ಮಳೆಯ ಹಾಗೂ ಪ್ರವಾಹದ ಭಯದಿಂದ ಮುಕ್ತರಾಗಿಲ್ಲ.
ಬುಧವಾರ ಬೆಳಗ್ಗಿನ ಜಾವ ಆರಂಭವಾದ ಮಳೆ ನಿರಂತರವಾಗಿ ಮುಂದುವರಿಯುತ್ತಿದೆ. ರಾತ್ರಿಯೂ ಮಳೆ ಅಬ್ಬರವಿದೆ. ಮೃತ್ಯತುಂಜಯ ನದಿಯಲ್ಲಿ ಸೋಮವಾರದ ಪ್ರವಾಹದ ಬಳಿಕ ನೀರಿನ ಮಟ್ಟ ಒಂದಿಷ್ಟು ಇಳಿದಿದ್ದರೂ ಅಪಾಯಕಾರಿಯಾಗಿಯೇ ಹರಿಯುತ್ತಿದೆ. ನೇತ್ರಾವತಿ ನದಿ ದಿಡುಪೆ ಪರಿಸರದಲ್ಲಿ ತುಂಬಿ ಹರಿಯುತ್ತಿದೆ. ಈ ಪ್ರದೇಶಗಳ ಬೆಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹಕ್ಕೆ ತುತ್ತಾದ ದಿಡುಪೆ, ಹಾಗೂ ಚಾರ್ಮಾಡಿ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಈಗಲೂ ಭೂ ಕುಸಿತದ ಭೀತಿಯಲ್ಲಿಯೇ ಬದುಕುತ್ತಿದ್ದಾರೆ.
ನದಿಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬಿದ್ದು ನದಿ ಹಾಗೂ ದಡದ ನಡುವೆ ಹಲವೆಡೆ ಅಂತರವೇ ಇಲ್ಲವಾಗಿದೆ, ನದಿಗಳಲ್ಲಿದ್ದ ಹೊಂಡಗಲೂ ಹೂಲಿನಿಂದ ತುಂಬಿ ಹೋಗಿದೆ. ಇದರಿಂದಾಗಿ ಸಣ್ಣ ಮಳೆ ಬಂದರೂ ನದಿಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ. ಜನರು ಭಯಪಡುವಂತಾಗಿದೆ. ನದಿ ದಡಗಳಲ್ಲಿಯೂ ಮರಳೇ ತುಂಬಿಕೊಂಡಿದ್ದು ವೇಗವಾಗಿ ನೀರು ತೋಟಗಳಿಗೂ ನುಗ್ಗುವಂತಾಗಿದೆ. ಚಾರ್ಮಾಡಿಯಲ್ಲಿ ಪ್ರವಹ ಭಯದಿಂದಾಗಿ ಸ್ತಳಾಂತರ ಹೊಂದಿದ್ದ ಹೆಚ್ಚಿನ ಕುಟುಂಬಗಳು ಮತ್ತೆ ಮನೆಗಳಿಗೆ ಹಿಂತಿರುಗಿದ್ದಾರೆ. ಮಳೆ ಇನ್ನೂ ಮುಂದುವರಿಯುವ ಸೂಚನೆಯಿದ್ದು ಮಳೆಯ ಅಬ್ಬರ ಮುಗಿಯುವ ವರೆಗೂ ಜನರು ಭಯದ ನೆರಳಿನಲ್ಲಿಯೇ ಬದುಕುವಂತಾಗಿದೆ.







