ತ್ಯಾಗಂ ಹರೇಕಳರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಕೊಣಾಜೆ: ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಅವರಿಗೆ ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಹರೇಕಳ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಕಳೆದ 16 ವರ್ಷದಿಂದ ದೈಹಿಕ ಶಿಕ್ಷಣ ಹಾಗೂ ಸ್ಕೌಟ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಕ್ರೀಡೆ ಮತ್ತು ಸ್ಕೌಟ್‍ನಲ್ಲಿ ಶಾಲೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಅವಧಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಸ್ಕೌಟ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ಇವರು ರಾಜ್ಯಮಟ್ಟದ ವಾಲಿಬಾಲ್, ಖೊ-ಖೊ ಹಾಗೂ ರಾಜ್ಯಮಟ್ಟದ ಅಥ್ಲೆಟಿಕ್ ತೀರ್ಪುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಇದೀಗ ಜಿಲ್ಲೆಯಲ್ಲಿ ನಡೆಯುವ ಕ್ರೀಡಾ ಪಂದ್ಯಾಟದಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷನಾಗಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಕೋಶಾಧಿಕಾರಿಯಾಗಿ , ಜೇಸಿಐ ಮಂಗಳಗಂಗೋತ್ರಿ ಸ್ಥಾಪಕ ಅಧ್ಯಕ್ಷನಾಗಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡು ಮುನ್ನಡೆಯುತ್ತಿದ್ದಾರೆ.
ಕನ್ನಡ ಸಾಹಿತ್ಯ ಮತ್ತು ಪ್ರಚಾರ ಸಂಸ್ಥೆಯಿಂದ `ಕನ್ನಡ ಸಿರಿ'
ಜೆಸಿಐಯಿಂದ ಜೇಸೀ ಸಾಧನಾ ಶ್ರೀ ಪ್ರಶಸ್ತಿ, ಜೇಸೀ ಕಮಲಪತ್ರ, ಮೊಸರು ಕುಡಿಕೆ ಉತ್ಸವದಲ್ಲಿ ಉತ್ತಮ ಸಂಘಟಕ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಇದೀಗ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಲಭಿಸಿದೆ.







