ಕ್ಯಾಚ್ ಪಡೆಯುವ ಭರದಲ್ಲಿ ಪರಸ್ಪರ ಢಿಕ್ಕಿಯಾಗಿ ಗಾಯಗೊಂಡ ಶ್ರೀಲಂಕಾ ಆಟಗಾರರು

ಪಲ್ಲೆಕಲೆ, ಸೆ.4: ನ್ಯೂಝಿಲ್ಯಾಂಡ್ ವಿರುದ್ಧ ಮಂಗಳವಾರ ನಡೆದ ಎರಡನೇ ಟ್ವೆಂಟಿ-20 ಪಂದ್ಯದ ಕೊನೆಯ ಓವರ್‌ನಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಪಡೆಯುವ ಭರದಲ್ಲಿ ಪರಸ್ಪರ ಢಿಕ್ಕಿಯಾದ ಶ್ರೀಲಂಕಾದ ಇಬ್ಬರು ಆಟಗಾರರು ಗಾಯಗೊಂಡಿದ್ದಾರೆ.
ಕಿವೀಸ್‌ಗೆ ಗೆಲ್ಲಲು 4 ಎಸೆತಗಳಲ್ಲಿ 7 ರನ್ ಅಗತ್ಯವಿತ್ತು. ಮಿಚೆಲ್ ಸ್ಯಾಂಟ್ನರ್ ಅವರು ಹಸರಂಗ ಬೌಲಿಂಗ್‌ನಲ್ಲಿ ಲಾಂಗ್-ಆನ್‌ನತ್ತ ಚೆಂಡನ್ನು ಅಟ್ಟಿದರು. ಶೆಹಾನ್ ಜಯಸೂರ್ಯ ಬೌಂಡರಿಲೈನ್‌ನಲ್ಲಿ ಉತ್ತಮ ಕ್ಯಾಚ್ ಪಡೆಯಲು ಸಫಲರಾಗಿದ್ದರು. ಮತ್ತೊಂದೆಡೆ ಕ್ಯಾಚ್ ಪಡೆಯುವ ಉದ್ದೇಶದಿಂದ ಮಿಡ್ ವಿಕೆಟ್‌ನಿಂದ ಓಡಿ ಬಂದ ಕುಸಾಲ್ ಮೆಂಡಿಸ್, ಜಯಸೂರ್ಯಗೆ ಢಿಕ್ಕಿಯಾದರು. ಆಗ ಜಯಸೂರ್ಯ ಅವರ ಕಾಲು ಬೌಂಡರಿ ಲೈನ್‌ಗೆ ತಾಗಿದ ಕಾರಣ ಅಂಪೈರ್ ಸಿಕ್ಸರ್ ನೀಡಿದರು. ಢಿಕ್ಕಿಯಾದ ತಕ್ಷಣ ಇಬ್ಬರು ಆಟಗಾರರು ಮೈದಾನದಲ್ಲಿ ಕುಸಿದುಬಿದ್ದರು. ಮೈದಾನದ ಸಿಬ್ಬಂದಿ ಅವರನ್ನು ಸುತ್ತುವರಿದು ತಪಾಸಣೆ ನಡೆಸಿದರು.
‘‘ಇಬ್ಬರು ಅಪಾಯದಿಂದ ಪಾರಾಗಿದ್ದು, ಮುಂದಿನ ಪಂದ್ಯದಲ್ಲಿ ಆಡುವ ವಿಶ್ವಾಸವಿದೆ’’ ಎಂದು ನಾಯಕ ಲಸಿತ್ ಮಾಲಿಂಗ ಅವರು ಜಯಸೂರ್ಯ ಹಾಗೂ ಮೆಂಡಿಸ್ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜಯಸೂರ್ಯ ಹಾಗೂ ಮೆಂಡಿಸ್ ಬೈಕ್‌ನಿಂದ ಕೆಳಗೆ ಬಿದ್ದು ಪರಚಿದ ಗಾಯವಾಗಿತ್ತು.





