ತಾಂಡಾಗಳಲ್ಲಿ ಸಂಚಾರಿ ವೈನ್‌ಶಾಪ್‌ಗೆ ಚಿಂತನೆ: ಅಬಕಾರಿ ಸಚಿವ ಎಚ್.ನಾಗೇಶ್

ಬೆಂಗಳೂರು, ಸೆ.4: ರಾಜ್ಯದಲ್ಲಿ ಕಳ್ಳಭಟ್ಟಿ ಮಾರಾಟ ತಡೆಯುವ ನಿಟ್ಟಿನಲ್ಲಿ ತಾಂಡಗಳು ಸೇರಿದಂತೆ ಎಲ್ಲೆಲ್ಲಿ ವೈನ್‌ಶಾಪ್‌ಗಳು ಇರುವುದಿಲ್ಲವೋ ಆ ಕಡೆಗಳಲ್ಲಿ ಸಂಚಾರಿ ವೈನ್‌ಶಾಪ್‌ಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳಭಟ್ಟಿ ತಯಾರಿಸುವ ಕೇಂದ್ರಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆಯುತ್ತಿದ್ದು, ಕೂಡಲೇ ಅವುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸೂಚನೆ ನೀಡಲಾಗಿದೆ ಎಂದರು.
2018-19ನೇ ಸಾಲಿಗೆ 19,750 ಕೋಟಿ ರೂ.ಆರ್ಥಿಕ ಗುರಿಯನ್ನು ಹೊಂದಲಾಗಿತ್ತು. ಅದರಂತೆ 19,943(ಶೇ.100.98) ಕೋಟಿ ರೂ. ಹೆಚ್ಚುವರಿ ಗುರಿಯನ್ನು ಸಾಧಿಸಲಾಗಿದೆ. 2019-20ನೇ ಸಾಲಿಗೆ 20,950 ಕೋಟಿ ರೂ. ನಿಗದಿಪಡಿಸಲಾಗಿದ್ದು, ಈ ವರ್ಷದ ಆಗಸ್ಟ್ ಅಂತ್ಯದ ವೇಳೆಗೆ 9,099 ಕೋಟಿ ರೂ.ಆದಾಯ ಬಂದಿದೆ ಎಂದು ಅವರು ಹೇಳಿದರು.
2018-19ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಲ್ಲಿ ಜಾರಿ ಮತ್ತು ತನಿಖಾ ಚಟುವಟಿಕೆಗಳಡಿಯಲ್ಲಿ ದಾಳಿ ನಡೆಸಿ 46,676 ಪ್ರಕರಣಗಳನ್ನು ದಾಖಲಿಸಿದ್ದು, 29,660 ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ 1,770 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, 20.90 ಕೋಟಿ ರೂ.ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ಹೆದ್ದಾರಿ ಪಕ್ಕದಲ್ಲಿರುವ ಡಾಬಾಗಳಲ್ಲಿ ಮತ್ತು ಇತರೇ ಹೊಟೇಲ್‌ಗಳಲ್ಲಿ ಅಕ್ರಮ ಮದ್ಯ ಸರಬರಾಜು ಮಾಡುತ್ತಿರುವುದು ಕಂಡುಬಂದಿದೆ. ಅದನ್ನು ಕೂಡಲೇ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಲಾಗಿದೆ. ಎಲ್ಲ ಅಬಕಾರಿ ವಸ್ತುಗಳ ಉತ್ಪಾದನೆ, ಸಾಗಾಣಿಕೆ ಮತ್ತು ಮಾರಾಟವನ್ನು ಕ್ರಮಬದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.
ಅಬಕಾರಿ ಅಧಿಕಾರಿಗಳ ಸಾಮರ್ಥ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಅಬಕಾರಿ ಅಪರಾಧಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಜಾರಿ ಮತ್ತು ತನಿಖೆ ಕೈಗೊಳ್ಳುವುದು ಹಾಗೂ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವಂತಹ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಸುರಕ್ಷಿತವಲ್ಲದ ಮದ್ಯದ ಬಳಕೆಯನ್ನು ನಿಯಂತ್ರಿಸಿ, ಆರೋಗ್ಯಕರವಾದ ಮದ್ಯದ ಸರಬರಾಜು ಮಾಡಿ, ಅಬಕಾರಿ ಆದಾಯವನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.
ಮದ್ಯ ನಿಷೇಧ ಇಲ್ಲ
ಮದ್ಯ ನಿಷೇಧ ಮಾಡಬೇಕೆಂದು ಆಗ್ರಹಿಸಿ ಚಿತ್ರದುರ್ಗದಿಂದ ಮಹಿಳೆಯರು ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಮದ್ಯ ನಿಷೇಧದ ಕುರಿತು ಸರಕಾರದ ಮುಂದೆ ಯಾವುದೇ ಚಿಂತನೆ ಇಲ್ಲ. ರಾಜ್ಯಕ್ಕೆ ಆದಾಯ ಬೇಕಾಗಿದೆ. ಯಾರೋ ಮಹಿಳೆಯರು ಒತ್ತಾಯ ಮಾಡಿದ್ದಾರೆಂದು ನಿಷೇಧ ಮಾಡಲು ಸಾಧ್ಯವಾಗುವುದಿಲ್ಲ.
-ಎಚ್.ನಾಗೇಶ್, ಅಬಕಾರಿ ಸಚಿವ







