ಗುತ್ತಿಗೆದಾರನ ಹತ್ಯೆ: ಬಿಹಾರ ಶಾಸಕ ಸಂಕಷ್ಟದಲ್ಲಿ

ಪಾಟ್ನಾ, ಸೆ.5: ತನ್ನ ನಿವಾಸದಲ್ಲಿ ಎ.ಕೆ 47 ರೈಫಲ್ ಮತ್ತು ಕೆಲವು ಹ್ಯಾಂಡ್ ಗ್ರೆನೇಡ್ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬಂಧಿತನಾಗಿ ಜೈಲುಪಾಲಾಗಿರುವ ಬಿಹಾರದ ವಿವಾದಾತ್ಮಕ ಶಾಸಕ ಅನಂತ್ ಸಿಂಗ್ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಥಳೀಯ ಗುತ್ತಿಗೆದಾರನ ಹತ್ಯಾಯತ್ನಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಇಲಾಖೆ ಪರೀಕ್ಷಿಸಿದ ಧ್ವನಿಯ ಮಾದರಿ ಸಿಂಗ್ ಅವರ ಧ್ವನಿಯ ಜೊತೆ ಹೊಂದಾಣಿಕೆಯಾಗುತ್ತದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸದ್ಯ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಸಿಂಗ್ ಬಂಧನಕ್ಕೂ ಮೊದಲು ತನ್ನ ಧ್ವನಿಯ ಮಾದರಿಯನ್ನು ನೀಡಿದ್ದರು. ಗುತ್ತಿಗೆದಾರನ ಹತ್ಯೆಯ ಸಂಚು ರೂಪಿಸುವುದು ಆಡಿಯೊ ಒಂದರಲ್ಲಿ ದಾಖಲಾಗಿರುವುದನ್ನು ಪರಿಶೀಲಿಸಿದ ನಂತರ ಪೊಲೀಸರು ಸಿಂಗ್ರನ್ನು ಬಂಧಿಸಿದ್ದರು.
ಗುತ್ತಿಗೆದಾರ ಮತ್ತು ಜೆಡಿ(ಯು) ಕಾರ್ಯಕರ್ತನಾಗಿರುವ ಆತನ ಸಹೋದರ ಮೇಲೆ ಜುಲೈ ಕೊನೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಸಿಂಗ್ ಮನೆಯಲ್ಲಿ ಗ್ರೆನೇಡ್ಗಳು ಮತ್ತು ರೈಫಲ್ ಪತ್ತೆಯಾದ ಸಂದರ್ಭದಲ್ಲಿ ತನ್ನ ವಿರುದ್ಧ ಜೆಡಿ(ಯು)ನಾಯಕರು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
ಸುಮಾರು ಒಂದು ವಾರ ಬಂಧನದಿಂದ ತಪ್ಪಿಸಿಕೊಂಡು ಸುತ್ತಾಡುತ್ತಿದ್ದ ಸಿಂಗ್ ಅಂತಿಮವಾಗಿ ದಿಲ್ಲಿ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಬಿಹಾರ ಪೊಲೀಸರ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಅವರು ತಿಳಿಸಿದ್ದರು.