ಇರಾನ್ ತೈಲ ಟ್ಯಾಂಕರ್ನ ಭಾರತೀಯ ಕ್ಯಾಪ್ಟನ್ಗೆ ಮಿಲಿಯಗಟ್ಟಳೆ ಡಾಲರ್ ಆಮಿಷ ಒಡ್ಡಿದ್ದ ಅಮೆರಿಕ
ವಾಶಿಂಗ್ಟನ್, ಸೆ. 5: ತೈಲವನ್ನು ಹೇರಿಕೊಂಡು ಸಿರಿಯಕ್ಕೆ ಹೋಗುತ್ತಿತ್ತು ಎಂದು ಶಂಕಿಸಲಾಗಿದ್ದ ಇರಾನ್ನ ತೈಲ ಟ್ಯಾಂಕರ್ನ ಭಾರತೀಯ ಕ್ಯಾಪ್ಟನ್ಗೆ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕವಾಗಿ ಹಲವು ಮಿಲಿಯ ಡಾಲರ್ಗಳ ಆಮಿಷ ಒಡ್ಡಿದ್ದರು ಎನ್ನುವುದನ್ನು ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ಖಚಿತಪಡಿಸಿದೆ.
‘ಅಡ್ರಿಯಾನ್ ಡಾರ್ಯ 1’ ಎಂಬ ಹೆಸರಿನ ತೈಲ ಟ್ಯಾಂಕರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವ ಯಾವುದೇ ದೇಶದತ್ತ ತಿರುಗಿಸಿದರೆ, ಆರಾಮವಾಗಿ ಜೀವನ ಸಾಗಿಸಲು ಸಾಧ್ಯವಾಗುವಂತೆ ಮಿಲಿಯಗಟ್ಟಳೆ ಡಾಲರ್ ಹಣವನ್ನು ನೀಡುವ ಆಮಿಷವನ್ನು ಒಳಗೊಂಡ ಇಮೇಲ್ಗಳನ್ನು ಬ್ರಯಾನ್ ಹುಕ್ ಕ್ಯಾಪ್ಟನ್ ಅಖಿಲೇಶ್ ಕುಮಾರ್ಗೆ ಕಳುಹಿಸಿದ್ದರು ಎಂದು ‘ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.
ಬ್ರಯಾನ್ ಹುಕ್ ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಇರಾನ್ ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರಿಯಾಗಿದ್ದಾರೆ.
‘‘ನಾವು ಫೈನಾನ್ಶಿಯಲ್ ಟೈಮ್ಸ್ನ ಲೇಖನವನ್ನು ನೋಡಿದ್ದೇವೆ ಹಾಗೂ ಅದರಲ್ಲಿ ಒದಗಿಸಲಾಗಿರುವ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸುತ್ತೇವೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರೆಯೊಬ್ಬರು ಹೇಳಿದರು.
ಮೊದಲು ‘ಗ್ರೇಸ್ 1’ ಎಂಬ ಹೆಸರನ್ನು ಹೊಂದಿದ್ದ ಈ ತೈಲ ಟ್ಯಾಂಕರನ್ನು ಬ್ರಿಟಿಶ್ ಆಳ್ವಿಕೆಗೆ ಒಳಪಟ್ಟ ಜಿಬ್ರಾಲ್ಟರ್ನಲ್ಲಿ ಆರು ವಾರಗಳ ಕಾಲ ನಿರ್ಬಂಧದಲ್ಲಿ ಇಡಲಾಗಿತ್ತು. ಐರೋಪ್ಯ ಒಕ್ಕೂಟದ ದಿಗ್ಬಂಧನಗಳನ್ನು ಎದುರಿಸುತ್ತಿರುವ ದೇಶಗಳಿಗೆ ಟ್ಯಾಂಕರ್ ಹೋಗುವುದಿಲ್ಲ ಎಂಬ ಶರತ್ತಿನ ಮೇರೆಗೆ ಅದನ್ನು ಬಿಡುಗಡೆ ಮಾಡಲಾಗಿತ್ತು.
ಅಮೆರಿಕದ ಆಮಿಷವನ್ನು ತಿರಸ್ಕರಿಸಿದ ಭಾರತೀಯ
ಅಖಿಲೇಶ್ ಕುಮಾರ್ ಜಿಬ್ರಾಲ್ಟರ್ನಲ್ಲಿ ಕ್ಯಾಪ್ಟನ್ ಆಗಿ ಜವಾಬ್ದಾರಿ ವಹಿಸಿಕೊಂಡರು.
ಆದರೆ, ಅವರು ಅಮೆರಿಕದ ಆಮಿಷಕ್ಕೆ ಒಳಗಾಗದೆ ಇದ್ದಾಗ, ಅಮೆರಿಕದ ಖಜಾನೆ ಇಲಾಖೆಯು ಹಡಗು ಮತ್ತು ಅಖಿಲೇಶ್ ಕುಮಾರ್ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿತು.
ದಿಗ್ಬಂಧನಕ್ಕೊಳಗಾದವರ ಆಸ್ತಿ ಅಮೆರಿಕದಲ್ಲಿದ್ದರೆ ಅದು ಮುಟ್ಟುಗೋಲಾಗುತ್ತದೆ ಹಾಗೂ ಅವರು ಅಮೆರಿಕದ ಕಂಪೆನಿಗಳೊಂದಿಗೆ ಯಾವುದೇ ಆರ್ಥಿಕ ವ್ಯವಹಾರಗಳನ್ನು ಮಾಡುವಂತಿಲ್ಲ.