ಬೆಳ್ತಂಗಡಿ-ಚಾರ್ಮಾಡಿ ನೆರೆ ಸಂತ್ರಸ್ತರಿಗೆ ಬಿಲ್ಲವರ ಅಸೋಸಿಯೇಶನ್ ನೆರವು

ಮುಂಬಯಿ, ಸೆ.4: ಭಾರೀ ಮಳೆಗೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೊಳಗಾದ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಸಂತ್ರಸ್ತರಿಗೆ ಮುಂಬಯಿಯ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ನೇತೃತ್ವದ ತಂಡ ನೆರವಾಗಿದ್ದು, ಇಂದು ಬೆಳ್ತಂಗಡಿಗೆ ಆಗಮಿಸಿ ಖುದ್ದಾಗಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿತು.
ನೆರೆ ಸಂತ್ರಸ್ತರಿಗೆ ಬೇಕಾದ ಆಹಾರ, ಬಟ್ಟೆಗಳನ್ನು ಒದಗಿಸಿದ ತಂಡವು, ತನ್ನ 36 ಕಾರ್ಯಕರ್ತರೊಂದಿಗೆ ನೆರೆ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿತು. ಅಸೋಸಿಯೇಶನ್‌ನ ಉಪಾಧ್ಯಕ್ಷ ದಯಾನಂದ್ ಆರ್.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಅಮೀನ್, ಆರ್ಕಿಟೆಕ್ಟ್ ಪ್ರಮಲ್ ಕುಮಾರ್ ಮಂಗಳೂರು, ಸೇರಿದಂತೆ ಸೇವಾದಳದ ಕಾರ್ಯಾಧ್ಯಕ್ಷ ಶಂಕರ್ ಡಿ.ಪೂಜಾರಿ ಮಾರ್ಗದರ್ಶನದಲ್ಲಿ ಸೇವಾದಳದ ದಳಪತಿ ಉಪ ದಳನಾಯಕ ಸುಧಾಕರ ಎ.ಪೂಜಾರಿ ಸೇರಿದಂತೆ ಸುಮಾರು 26 ಸೇವಾದಳ ಕಾರ್ಯಕರ್ತರು ತಂಡದಲ್ಲಿದ್ದರು.
ಚಾರ್ಮಾಡಿ, ಕೊಳಂಬೆ, ಅರಣೆಪಾದೆ, ವಳಂಬ್ರ, ಆರ್ತಿಬೈಲು, ಪುಚ್ಚೆಂಗೆರಿ, ಕಕ್ಕಿಂಜೆ, ಚಿಬಿದ್ರೆ, ಅಂತರಬೈಲು, ಕಕ್ಕುದಡ್ಕ, ಮುಗುಳಿದಡ್ಕ, ಮಲವಂತಿಗೆ, ಕಡಿರುದ್ಯಾವರ, ಕಕ್ಕಾವು, ಕಿಲ್ಲೂರು ಮತ್ತಿತರ ಜನರ ಭೇಟಿ ನಡೆಸಿ ಬಟ್ಟೆ, ಆಹಾರ ವಸ್ತುಗಳೊಂದಿಗೆ ಧನ ಸಹಾಯವನ್ನು ಮಾಡಿತು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಅರೀಫ್ ಕಲ್ಕಟ್ಟಾ, ಸ್ಥಾನೀಯ ಮುಖಂಡರಾದ ಕೃಷ್ಣಪ್ಪ ಗುಡಿಗಾರ್, ಸುನೀಲ್ ಕನ್ಯಾಡಿ, ಗಣೇಶ್ ಕೋಟ್ಯಾನ್, ಕೀರ್ತಿರಾಜ ವಳಂಬ್ರ ಉಪಸ್ಥಿತರಿದ್ದರು.







