ಸ್ಮಿತ್ 26ನೇ ಶತಕ
ಆ್ಯಶಸ್ 4ನೇ ಟೆಸ್ಟ್

► ಟೆಸ್ಟ್‌ನಲ್ಲಿ ವೇಗವಾಗಿ 26 ಶತಕ ದಾಖಲಿಸಿದ ಬ್ಯಾಟ್ಸ್‌ಮನ್‌ಗಳು
ಎಜ್‌ಬಾಸ್ಟನ್, ಸೆ.5: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಆಶ್ಯಸ್ ಕ್ರಿಕೆಟ್ ಟೆಸ್ಟ್‌ನಲ್ಲಿ ಗುರುವಾರ ಶತಕ ದಾಖಲಿಸಿದ್ದಾರೆ.
ಟೆಸ್ಟ್‌ನ ಎರಡನೇ ದಿನವಾಗಿರುವ ಗುರುವಾರ ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ 160 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ತನ್ನ 26ನೇ ಶತಕ ಗಳಿಸಿದರು. ಇದು ಈ ಸರಣಿಯಲ್ಲಿ ಸ್ಮಿತ್ ಗಳಿಸಿದ ಮೂರನೇ ಶತಕವಾಗಿದೆ. ಮೊದಲ ಟೆಸ್ಟ್‌ನಲ್ಲಿ ಅವಳಿ ಶತಕ (144 ಮತ್ತು 142) ದಾಖಲಿಸಿದ್ದ ಸ್ಮಿತ್, ಲಾರ್ಡ್ಸ್‌ನಲ್ಲಿ ಎರಡನೇ ಟೆಸ್ಟ್‌ನಲ್ಲಿ 92 ರನ್ ಗಳಿಸಿ ಶತಕ ವಂಚಿತಗೊಂಡಿದ್ದರು. ಮೂರನೇ ಟೆಸ್ಟ್‌ನಲ್ಲಿ ಗಾಯದ ಕಾರಣದಿಂದಾಗಿ ಆಡಿರಲಿಲ್ಲ. ಇದೀಗ ನಾಲ್ಕನೇ ಟೆಸ್ಟ್‌ಗೆ ಮತ್ತೆ ತಂಡಕ್ಕೆ ವಾಪಸಾಗಿರುವ ಸ್ಮಿತ್ ತಮ್ಮ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿದ್ದಾರೆ.
ವಿಶ್ವದ ನಂ.1 ಬ್ಯಾಟ್ಸ್‌ಮನ್ 30ರ ಹರೆಯದ ಸ್ಮಿತ್ 67ನೇ ಟೆಸ್ಟ್‌ನ 121ನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ 136 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯದ ಡಾನ್ ಬ್ರಾಡ್ಮನ್ 69 ಇನಿಂಗ್ಸ್ ಗಳಲ್ಲಿ 26 ಶತಕ ದಾಖಲಿಸಿದ್ದರು. ಬ್ರಾಡ್ಮನ್ ಬಳಿಕ ಟೆಸ್ಟ್‌ನಲ್ಲಿ ವೇಗವಾಗಿ 26 ಶತಕ ದಾಖಲಿಸಿದ ವಿಶ್ವದ ಎರಡನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.
ಕೊಹ್ಲಿ 79 ಟೆಸ್ಟ್‌ಗಳ 135 ಇನಿಂಗ್ಸ್‌ಗಳಲ್ಲಿ 25 ಶತಕ ದಾಖಲಿಸಿದ್ದರು. ಅವರ ದಾಖಲೆಯನ್ನು ಸ್ಮಿತ್ ಹಿಂದಿಕ್ಕಿದ್ದಾರೆ.ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 44 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿತ್ತು. 60 ರನ್ ಗಳಿಸಿದ್ದ ಸ್ಮಿತ್ ಮತ್ತು 18 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದರು.
ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ಸ್ಮಿತ್ ತನ್ನ ಸ್ಕೋರ್‌ನ್ನು 65ಕ್ಕೇರಿಸುವಷ್ಟರಲ್ಲಿ ಜೀವದಾನ ಪಡೆದರು. ವೇಗಿ ಆರ್ಚರ್ ತನ್ನ ಎಸೆತದಲ್ಲಿ ಕ್ಯಾಚ್ ಕೈ ಚೆಲ್ಲಿದರು. ಇದರ ಲಾಭ ಪಡೆದ ಸ್ಮಿತ್ ಶತಕ ಗಳಿಸಿದರು. ಟೆಸ್ಟ್‌ನಲ್ಲಿ 8ನೇ ಬಾರಿ 150ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 3ನೇ ಬಾರಿ ಈ ಸಾಧನೆ ಮಾಡಿದ್ದಾರೆ. ಸ್ಮಿತ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧ ಸಜೆ ಅನುಭವಿಸಿ ಆ್ಯಶಸ್ ಸರಣಿಯಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ವಾಪಸಾಗಿದ್ದರು.







