ನೂತನ ಮೋಟಾರು ವಾಹನ ಕಾಯ್ದೆ: ದಂಡದಲ್ಲೂ ದಾಖಲೆ ನಿರ್ಮಿಸಿದ ಹರ್ಯಾಣ, ಒಡಿಶಾ

ಹೊಸದಿಲ್ಲಿ, ಸೆ.6: ಹರ್ಯಾಣ ಮತ್ತು ಒಡಿಶಾ ರಾಜ್ಯ ಪೊಲೀಸರು ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೊದಲ ಐದು ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ 4,400 ವಾಹನ ಚಾಲಕರಿಂದ 1.4 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.
ಹರ್ಯಾಣದಲ್ಲಿ 343 ದಂಡ ಚಲನ್ ನೀಡಲಾಗಿದ್ದು, 52.32 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಒಡಿಶಾದಲ್ಲಿ 4,080 ಚಲನ್ ನೀಡಲಾಗಿದ್ದು, 46 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 88.90 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
ತಿದ್ದುಪಡಿಯಾದ ಕಾಯ್ದೆಯ 63 ಸೆಕ್ಷನ್‌ಗಳ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ಸೆಪ್ಟೆಂಬರ್ 1ರಿಂದ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಮೊದಲ ದಿನ ದಿಲ್ಲಿಯಲ್ಲಿ 39 ಸಾವಿರ ಮಂದಿಗೆ ದಂಡ ವಿಧಿಸಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ, ವಿರೂಪಗೊಂಡ ನಂಬರ್‌ಪ್ಲೇಟ್ ಹಾಗೂ ಕರ್ಕಶ ಹಾರ್ನ್ ಪ್ರಕರಣಗಳು ಇದರಲ್ಲಿ ಸೇರಿವೆ. ಉತ್ತರಪ್ರದೇಶದಲ್ಲಿ 3,121, ಚಂಡೀಗಢದಲ್ಲಿ 1,499 ಹಾಗೂ ಜಾರ್ಖಂಡ್‌ನಲ್ಲಿ 1,400 ಮಂದಿಗೆ ದಂಡ ವಿಧಿಸಲಾಗಿದೆ.
ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು, ವಿಶ್ವಸಂಸ್ಥೆಯ ಬ್ರಸಿಲ್ಲಾ ಒಪ್ಪಂದಕ್ಕೆ ಅನುಗುಣವಾಗಿ ಭಾರತ 2020ರ ಒಳಗಾಗಿ ಇದನ್ನು ಶೇಕಡ 50ರಷ್ಟು ಕಡಿಮೆ ಮಾಡಬೇಕಾಗಿದೆ.







