ದಿಲ್ಲಿ ಶಾಸಕಿ ಅಲ್ಕಾ ಲಾಂಬಾ ಆಪ್‌ಗೆ ರಾಜೀನಾಮೆ

ಹೊಸದಿಲ್ಲಿ, ಸೆ. 6: ಹಲವು ತಿಂಗಳ ಅಸಮಾಧಾನದ ಬಳಿಕ ಆಪ್ ಶಾಸಕಿ ಅಲ್ಕಾ ಲಾಂಬಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘‘ಇದು ವಿದಾಯ ಹೇಳುವ ಸಮಯ’’ ಎಂದಿದ್ದಾರೆ.
ತನ್ನ ರಾಜೀನಾಮೆ ಸ್ವೀಕರಿಸುವಂತೆ ಪಕ್ಷದ ವರಿಷ್ಠ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಲಾಂಬಾ ಟ್ವಿಟ್ಟರ್ ಮೂಲಕ ಆಗ್ರಹಿಸಿದ್ದಾರೆ. ಅಲ್ಲದೆ, ಆಪ್ ಈಗ ‘ಖಾಸ್ ಆದ್ಮಿ ಪಕ್ಷ’ ಆಗಿದೆ ಎಂದು ಆರೋಪಿಸಿದ್ದಾರೆ. ಕಳೆದ ವಾರ ಅವರು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯಿಂದಾಗಿ ಅವರು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ವದಂತಿ ಹರಡಿತ್ತು.
ಆಪ್‌ಗೆ ವಿದಾಯ ಹೇಳುವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಮಯ ಬಂದಿದೆ. ಕಳೆದ ಆರು ವರ್ಷಗಳ ಪ್ರಯಾಣ ನನಗೆ ಉತ್ತಮ ಕಲಿಕೆಯಾಗಿತ್ತು. ಎಲ್ಲರಿಗೂ ಕೃತಜ್ಞತೆ ಎಂದು ಅಲ್ಕಾ ಲಾಂಬಾ ಟ್ವೀಟ್ ಮಾಡಿದ್ದಾರೆ. ಆಫ್‌ನ ನಾಯಕ ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ಅಸಮಾಧಾನಗೊಂಡಿದ್ದ 43ರ ಹರೆಯದ ಲಾಂಬಾ ಕಳೆದ ಮಂಗಳವಾರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು.
ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ನಾವಿಬ್ಬರು ಚರ್ಚೆ ನಡೆಸಿದೆವು ಎಂದು ಅವರು ಆಗ ಸುದ್ದಿಗಾರರಿಗೆ ತಿಳಿಸಿದ್ದರು. ಲಾಂಬಾ ಅವರು ಈ ಹಿಂದೆ 20 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದರು. 2013ರಲ್ಲಿ ಅವರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್‌ಗೆ ಸೇರಿದ್ದರು. ಅವರು ದಿಲ್ಲಿ ಚುನಾವಣೆಯಲ್ಲಿ ಚಾಂದನಿ ಚೌಕ್ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು.